ವಯನಾಡ್/ನವದೆಹಲಿ: ಮಾರಣಾಂತಿಕ ಭೂಕುಸಿತ ಉಂಟಾಗಿ ಅಪಾರ ಸಾವು-ನೋವು ಕಂಡ ಕೇರಳ ರಾಜ್ಯದ ವಯನಾಡ್ ಗೆ ಇಂದು ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.
ಭೂಕುಸಿತದ ನಂತರ ನಡೆಯುತ್ತಿರುವ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡುತ್ತಿದ್ದಾರೆ. ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಕಣ್ಣೂರಿಗೆ ಆಗಮಿಸಲಿದ್ದು, ಅಲ್ಲಿಂದ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ.
ಮಧ್ಯಾಹ್ನ 12:15 ರ ಸುಮಾರಿಗೆ, ವಿಪತ್ತಿಗೆ ಆಹುತಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಪ್ರಸ್ತುತ ನಡೆಯುತ್ತಿರುವ ಸ್ಥಳಾಂತರ ಕಾರ್ಯಾಚರಣೆಗಳ ಕುರಿತು ರಕ್ಷಣಾ ತಂಡಗಳಿಂದ ಮಾಹಿತಿ ಪಡೆಯಲಿದ್ದಾರೆ. ಸಂಕಷ್ಟ ಪೀಡಿತರಿಗೆ ಸರ್ಕಾರದಿಂದ ಬೆಂಬಲ ನೀಡಲು ಪುನರ್ವಸತಿ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ.
ಸ್ಥಳಗಳ ಭೇಟಿಗಳ ಜೊತೆಗೆ, ಪ್ರಧಾನ ಮಂತ್ರಿ ಅವರು ಪರಿಹಾರ ಶಿಬಿರ ಮತ್ತು ಸ್ಥಳೀಯ ಆಸ್ಪತ್ರೆಗಳಿಗೆ ಸಹ ಭೇಟಿ ಕೊಡಲಿದ್ದಾರೆ. ಅಲ್ಲಿ ಅವರು ಭೂಕುಸಿತದ ಸಂತ್ರಸ್ತರು ಮತ್ತು ಬದುಕುಳಿದವರನ್ನು ಭೇಟಿ ಮಾಡಿ ಅವರು ಸಂಕಷ್ಟಗಳನ್ನು ಆಲಿಸಲಿದ್ದಾರೆ.
ನಂತರ ಸಮಗ್ರ ಪರಿಹಾರ ಪ್ರಯತ್ನಗಳನ್ನು ಕೈಗೊಳ್ಳುವ ಬಗ್ಗೆ ಪ್ರಧಾನಿಯವರು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
Advertisement