ನವದೆಹಲಿ: ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಚಾರ ಭಾಷಣದ ವೇಳೆ 100ಕ್ಕೂ ಹೆಚ್ಚು ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್(ಎಚ್‌ಆರ್‌ಡಬ್ಲ್ಯು) ವರದಿ ಹೇಳಿದೆ.
'ಮೋದಿಯ ಚುನಾವಣಾ ಪ್ರಚಾರ ದ್ವೇಷ ಭಾಷಣ' ಎಂಬ ಶೀರ್ಷಿಕೆಯ ಹೊಸ ವರದಿಯಲ್ಲಿ, ಮೋದಿ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಆಗಾಗ್ಗೆ ದ್ವೇಷ ಭಾಷಣ ಮಾಡಿದ್ದಾರೆ ಎಂದು ಎಚ್‌ಆರ್‌ಡಬ್ಲ್ಯು ಆರೋಪಿಸಿದೆ.
HRW ವರದಿಯು, ಭಾರತೀಯ ಜನತಾ ಪಕ್ಷ(ಬಿಜೆಪಿ) ಮೂರನೇ ಅವಧಿ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ, ಅಂಚಿನಲ್ಲಿರುವ ಗುಂಪುಗಳ ವಿರುದ್ಧ ತಾರತಮ್ಯ, ಹಗೆತನ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿದೆ ಎಂದು ಟೀಕಿಸಿದೆ.
ಮಾರ್ಚ್ 16 ರಂದು ಚುನಾವಣಾ ನೀತಿ ಸಂಹಿತೆ ಪ್ರಾರಂಭವಾದ ನಂತರ ಮೋದಿಯವರ ಎಲ್ಲಾ 173 ಪ್ರಚಾರ ಭಾಷಣಗಳನ್ನು ವಿಶ್ಲೇಷಿಸಿರುವುದಾಗಿ HRW ಹೇಳಿದೆ.
HRW ವರದಿಯು, ಕನಿಷ್ಠ 110 ಭಾಷಣಗಳಲ್ಲಿ, ಮೋದಿ ತನ್ನ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದಾರೆ. ಮೋಹಿ ತಪ್ಪು ಮಾಹಿತಿ ನೀಡುವ ಮೂಲಕ ಬಹುಸಂಖ್ಯಾತ ಹಿಂದೂ ಸಮುದಾಯದಲ್ಲಿ ಭಯ ಹುಟ್ಟುಹಾಕಿದರು ಎಂದು ಆರೋಪಿಸಲಾಗಿದೆ.
"ಭಾರತದ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ತಮ್ಮ ಪ್ರಚಾರ ಭಾಷಣಗಳಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ" ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಏಷ್ಯಾ ನಿರ್ದೇಶಕಿ ಎಲೈನ್ ಪಿಯರ್ಸನ್ ವರದಿಯಲ್ಲಿ ಹೇಳಿದ್ದಾರೆ.
Advertisement