
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಮೇಲೆ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಸಾವಿರಾರು ಮಂದಿ ವಿಶೇಷವಾಗಿ ಮಹಿಳೆಯರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ ಮಧ್ಯರಾತ್ರಿ ಬೀದಿಗಿಳಿದು ರಿಕ್ಲೇಮ್ ಚಳವಳಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು.
ನಮಗೆ ನ್ಯಾಯ ಬೇಕು ಎಂದು ಭಿತ್ತಿಪತ್ರಗಳನ್ನು ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿದರು. ಇಂದು ನಾನು ಕಚೇರಿಯಲ್ಲಿ 11 ಗಂಟೆ ಕೆಲಸ ಮಾಡಿ ಬಂದರೂ ಈ ರಾತ್ರಿ ಇಲ್ಲಿ ಸೇರಿದ್ದೇನೆ. ಕಾರಣ ಮಹಿಳೆಯರಿಗೆ ರಕ್ಷಣೆ ಭದ್ರತೆ ಸಿಗಬೇಕು. ರಾತ್ರಿ ಹೊತ್ತಿನಲ್ಲಿ ಮಹಿಳೆ ನಿರ್ಭೀತಿಯಿಂದ ಓಡಾಡಲು ಸಾಧ್ಯವಾದರೆ ಸ್ವಾತಂತ್ರ್ಯ ಸಿಕ್ಕಿದೆ ಎಂದರ್ಥ. ಮಹಿಳೆಯ ಮೇಲೆ ಅತ್ಯಾಚಾರವೆಸಗಿ ನಿಗೂಢವಾಗಿ ಹತ್ಯೆ ಮಾಡಿರುವ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಭಟನಾ ನಿರತ ಮಹಿಳೆ ಹೇಳುತ್ತಾರೆ.
ಮಧ್ಯರಾತ್ರಿಯ ಸಮಯದಲ್ಲಿ, ಪ್ರತಿಭಟನಾಕಾರರು ಸ್ವಾತಂತ್ರ್ಯ ದಿನಾಚರಣೆಗೆ ನಾಂದಿ ಹಾಡಲು ರಾಷ್ಟ್ರಗೀತೆಯನ್ನು ಹಾಡಿದರು.
ರಿಕ್ಲೇಮ್ ದಿ ನೈಟ್ ಚಳವಳಿ: 1977 ರಲ್ಲಿ ಇಂಗ್ಲೆಂಡಿನ ಲೀಡ್ಸ್‌ನಲ್ಲಿ ರಾತ್ರಿಯ ಸಮಯದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಚಲಿಸುವ ಸ್ವಾತಂತ್ರ್ಯವನ್ನು ಮರುಪಡೆಯಲು 'ರಿಕ್ಲೇಮ್ ದಿ ನೈಟ್ ಚಳವಳಿ' ಪ್ರಾರಂಭವಾಯಿತು. ನವೆಂಬರ್ 12, 1977 ರಂದು ಮೊದಲ ಮೆರವಣಿಗೆ ಯಾರ್ಕ್‌ಷೈರ್ ರಿಪ್ಪರ್ ಹತ್ಯೆಯನ್ನು ಖಂಡಿಸಿ ಮಾಡಿದ್ದಾಗಿತ್ತು.
2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆಯ ನಂತರ ಮಹಿಳೆಯರಿಗೆ "ರಿಕ್ಲೇಮ್ ದಿ ನೈಟ್" ಪ್ರತಿಭಟನೆಗಳು ನಡೆದಿದ್ದವು. 2017 ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಕಿರುಕುಳದ ನಂತರ 20 ನಗರಗಳಲ್ಲಿ ಮಹಿಳೆಯರು ಮೆರವಣಿಗೆ ನಡೆಸಿದರು.
ಕಳೆದ ರಾತ್ರಿ 'ರಿಕ್ಲೈಮ್ ದಿ ನೈಟ್' ಎಂಬ ಶೀರ್ಷಿಕೆಯ ಪ್ರತಿಭಟನೆಯ ಬ್ಯಾನರ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದವು, ದೇಶವು ತನ್ನ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಿದ್ಧವಾಗಿರುವುದರಿಂದ ಎಲ್ಲಾ ವರ್ಗದ ಜನರು ರಾತ್ರಿ 11.55 ರಿಂದ ಮಧ್ಯರಾತ್ರಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನು ಹೆಚ್ಚಿಸಲು ಕೋಲ್ಕತ್ತಾ ಮೆಟ್ರೋ ರೈಲ್ವೇ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಪ್ರಯಾಣಿಸಲು ಬಯಸುವ ಪ್ರತಿಭಟನಾಕಾರರಿಗೆ ಸಹಾಯ ಮಾಡಲು ಎರಡು ಹೆಚ್ಚುವರಿ ಜೋಡಿ ರೈಲುಗಳನ್ನು ಘೋಷಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಿದೆ. ಪ್ರಕರಣ ಸಂಬಂಧ ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ. 31 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಘಟನೆಯ ನಂತರ, ಆಸ್ಪತ್ರೆಯೊಳಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ಯಾಂಪಸ್‌ನೊಳಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದರೂ ವಿಧ್ವಂಸಕ ಕೃತ್ಯ ಏಕೆ ನಡೆದಿದೆ ಎಂಬ ಪ್ರಶ್ನೆಗಳು ಎದ್ದಿವೆ.
ಹೊರಗಿನವರು ಯಾರು ಬಂದರು ಮತ್ತು ಆವರಣ ನುಗ್ಗಿ ಹೇಗೆ ಒಳಬಂದರು, ಬ್ಯಾರಿಕೇಡ್ ಮುರಿದು ಹೇಗೆ ಬಂದರು ಎಂಬ ಪ್ರಶ್ನೆಗಳು ಎದ್ದಿವೆ.
Advertisement