ನವದೆಹಲಿ: ಸೆಬಿ ಮುಖ್ಯಸ್ಥರು ಮತ್ತು ಉದ್ಯಮಿ ಗೌತಮ್ ಅದಾನಿ ನಡುವಿನ ವ್ಯವಹಾರಿಕ ಸಂಬಂಧದ ಬಗ್ಗೆ ಹೆಂಡೆನ್‌ಬರ್ಗ್ ವರದಿ ಆರೋಪಗಳು ದೇಶಾದ್ಯಂತ ಭಾರೀ ಗದ್ದಲ ಸೃಷ್ಟಿಸಿದ್ದು, ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ರಾಜೀನಾಮೆ ನೀಡಬೇಕು ಮತ್ತು ಅದಾನಿ ಸಂಸ್ಥೆಯ ಬಗ್ಗೆ ಕೇಳಿಬಂದಿರುವ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.
ಸೆಬಿ ಮುಖ್ಯಸ್ಥರು ಮತ್ತು ಉದ್ಯಮಿ ಗೌತಮ್ ಅದಾನಿ ನಡುವಿನ ವ್ಯವಹಾರಿಕ ಸಂಬಂಧದ ಬಗ್ಗೆ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್, ಸೆಬಿ ಮುಖ್ಯಸ್ಥರಾಗಿ ಅವರ ಮುಂದುವರಿಕೆ "ಸಮರ್ಥನೀಯವಲ್ಲ" ಎಂದು ಹೇಳಿದೆ.
ಬುಚ್ ರಾಜೀನಾಮೆ ನೀಡಬೇಕು ಮತ್ತು ಅದಾನಿ "ಮೆಗಾ ಹಗರಣ" ಕುರಿತು ಸಂಪೂರ್ಣ ಜೆಪಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ದಿ ಮಾರ್ನಿಂಗ್ ಕಾಂಟೆಕ್ಸ್ಟ್‌ನ ಲೇಖನ ಉಲ್ಲೇಖಿಸಿ ಒತ್ತಾಯಿಸಿದ್ದಾರೆ.
ಮಾಧ್ಯಮ ವರದಿಯು ಈ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ: ಖಾಸಗಿ ಈಕ್ವಿಟಿ ಸಂಸ್ಥೆ ಬ್ಲ್ಯಾಕ್‌ಸ್ಟೋನ್ ಪಾಲನ್ನು ಹೊಂದಿರುವ ಕಂಪನಿಗಳನ್ನು ಒಳಗೊಂಡ ಎಲ್ಲಾ ವಿಷಯಗಳಿಂದ ಬುಚ್ ಹಿಂದೆ ಸರಿದಿದ್ದಾರೆಯೇ? ಹಾಗೆಯೇ ಎಷ್ಟು ಬ್ಲಾಕ್‌ಸ್ಟೋನ್ ಕಂಪನಿಗಳು ಆ ರಿಕ್ಯೂಸಲ್ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ? ಎಂದು ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಸೆಕ್ಯುರಿಟಿಸ್ ಹಾಗೂ ಶೇರು ವಿನಿಯಮ ಮಂಡಳಿ( ಸೆಬಿ) ಅಧ್ಯಕ್ಷರಿಗೆ ಸಂಬಂಧಿಸಿದ ಇತರ ಹಿತಾಸಕ್ತಿ ಸಂಘರ್ಷಗಳನ್ನು ದಿ ಮಾರ್ನಿಂಗ್ ಕಾಂಟೆಕ್ಸ್ಟ್ ಬೆಳಕಿಗೆ ತಂದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.
Advertisement