
ನವದೆಹಲಿ: ಜೆಎಂಎಂ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ತಾವು ಸಿಎಂ ಆಗಿದ್ದಾಗ "ಅವಮಾನ" ಅನುಭವಿಸಿದೆ ಮತ್ತು ಪಕ್ಷದಲ್ಲಿ ನನಗೆ ಯಾವುದೇ ಹುದ್ದೆ ಇರಲಿಲ್ಲ ಎಂದು ಭಾನುವಾರ ಹೇಳಿದ್ದಾರೆ.
ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯವರೆಗೂ "ತಮ್ಮ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ" ಎಂದು ಹೇಳುವ ಮೂಲಕ ಚಂಪೈ ಸೊರೆನ್ ಅವರು ಜೆಎಂಎಂ ತೊರೆಯುವ ಸುಳಿವು ನೀಡಿದ್ದಾರೆ.
ಜೆಎಂಎಂ ನಾಯಕ, ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಹರಡಿರುವ ಬೆನ್ನಲ್ಲೇ ದೆಹಲಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಚಂಪೈ ಸೊರೇನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲು ಅವಕಾಶ ನೀಡದಿದ್ದಾಗ ಮತ್ತು ಹಠಾತ್ ರಾಜೀನಾಮೆ ಕೇಳಿದಾಗ ತಾವು "ಪರ್ಯಾಯ ಮಾರ್ಗ ಹುಡುಕಲು" ಕಾರಣವಾಯಿತು ಎಂದು ಮಾಜಿ ಸಿಎಂ ಎಕ್ಸ್‌ನಲ್ಲಿನಲ್ಲಿ ಪೋಸ್ಟ್ ಮಾಡಿದ್ದಾರೆ.
ಜುಲೈ 3 ರಂದು ನಾನು ಜಾರಿಗೆ ತಂದಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಪಕ್ಷದ ನಾಯಕತ್ವವು ನನಗೆ ತಿಳಿಸದೆ ರದ್ದುಗೊಳಿಸಿದೆ ಎಂದು ಚಂಪೈ ಸೊರೆನ್ ಆರೋಪಿಸಿದ್ದಾರೆ.
“ನಾನು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಕಾರಣದ ಕುರಿತು ಪ್ರಶ್ನಿಸಿದಾಗ, ಜುಲೈ 3ರಂದು ಪಕ್ಷದ ಶಾಸಕರ ಸಭೆಯಿದ್ದು, ಅಲ್ಲಿಯವರೆಗೆ ನೀವು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಲಾಯಿತು” ಎಂದು ಚಂಪೈ ಸೊರೆನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಮತ್ತೊಬ್ಬ ವ್ಯಕ್ತಿಯು ಮುಖ್ಯಮಂತ್ರಿಯ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಕ್ಕಿಂತ ಹೆಚ್ಚು ಅವಮಾನಕಾರಿ ಸಂಗತಿ ಮತ್ತೇನಿದೆ” ಎಂದು ಅವರು ಪ್ರಶ್ನಿಸಿದ್ದಾರೆ.
Advertisement