ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಲ್ಕು ವರ್ಷದ ಇಬ್ಬರು ನರ್ಸರಿ ವಿದ್ಯಾರ್ಥಿನಿಯರ ಮೇಲೆ ಸ್ವಚ್ಛತಾ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದ್ದು, ಹೀನ ಕೃತ್ಯ ಖಂಡಿಸಿ ಮಂಗಳವಾರ ಪೋಷಕರು ಭಾರೀ ಪ್ರತಿಭಟನೆ ನಡೆಸಲಾಗಿದೆ.
ಪೋಷಕರು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಶಾಲಾ ಕಟ್ಟಡಕ್ಕೆ ಮುತ್ತಿಗೆ ಹಾಕಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಶಾಲಾ ಕಟ್ಟಡ ಹಾಗೂ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಪ್ರತಿಭಟನಾಕಾರರು ಬದ್ಲಾಪುರ ರೈಲು ನಿಲ್ದಾಣದಲ್ಲಿ ಹಲವಾರು ಗಂಟೆಗಳ ಸ್ಥಳೀಯ ರೈಲು ಸೇವೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ರೈಲು ಹಳಿಗಳಿಂದ ತೆರವುಗೊಳಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳನ್ನು ತಡೆದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.
ವರದಿಗಳ ಪ್ರಕಾರ, ಕಳೆದ ವಾರ ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ನಡೆದಿದೆ. ಆಗಸ್ಟ್ 18 ರಂದು ಪೋಷಕರಿಗೆ ದೌರ್ಜನ್ಯದ ವಿಷಯ ತಿಳಿದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ 24 ವರ್ಷದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.
ಘಟನೆಗೆ ಕಾರಣರಾದ ಪ್ರಾಂಶುಪಾಲರು, ತರಗತಿ ಶಿಕ್ಷಕಿ ಮತ್ತು ಮಹಿಳಾ ಸಹಾಯಕಿಯರನ್ನು ಶಾಲಾ ಆಡಳಿತ ಮಂಡಳಿ ಸೋಮವಾರ ಅಮಾನತು ಮಾಡಿದೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಧ್ಯಪ್ರವೇಶಿಸಿದ ನಂತರವೇ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯನ್ನು ಖಂಡಿಸಿ ಹಲವು ಸಂಘಟನೆಗಳು ಬದ್ಲಾಪುರ ಬಂದ್‌ಗೆ ಕರೆ ನೀಡಿವೆ.
ಭಾರೀ ಪ್ರತಿಭಟನೆಗಳ ನಡುವೆ, ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಆದೇಶಿಸಿದೆ.
ಕರ್ತವ್ಯ ಲೋಪವೆಸಗಿರುವ ಬದ್ಲಾಪುರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement