ನವದೆಹಲಿ: ಸೆಪ್ಟೆಂಬರ್ 3 ರಂದು ನಡೆಯಲಿರುವ ರಾಜ್ಯಸಭೆಯ ಉಪಚುನಾವಣೆಗೆ ಬಿಜೆಪಿ ಮಂಗಳವಾರ ಒಂಬತ್ತು ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದು, ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ಅವರನ್ನು ರಾಜಸ್ಥಾನದಿಂದ ಮತ್ತು ಜಾರ್ಜ್ ಕುರಿಯನ್ ಅವರನ್ನು ಮಧ್ಯಪ್ರದೇಶದಿಂದ ಕಣಕ್ಕಿಳಿಸಿದೆ.
ಒಡಿಶಾದಿಂದ ಮಾಜಿ ಬಿಜೆಡಿ ನಾಯಕಿ ಮಮತಾ ಮೊಹಾಂತಾ, ಹರಿಯಾಣದಿಂದ ಮಾಜಿ ಕಾಂಗ್ರೆಸ್ ನಾಯಕಿ ಕಿರಣ್ ಚೌಧರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಇಬ್ಬರೂ ನಾಯಕರು ಇತ್ತೀಚೆಗೆ ಬಿಜೆಪಿ ಸೇರಿದ್ದರು.
ಬಿಜೆಪಿ ಬಿಡುಗಡೆ ಮಾಡಿರುವ ಒಂಬತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ, ಮನನ್ ಕುಮಾರ್ ಮಿಶ್ರಾ ಬಿಹಾರದಿಂದ, ಧೈರ್ಯಶೀಲ್ ಪಾಟೀಲ್ ಮಹಾರಾಷ್ಟ್ರದಿಂದ ಮತ್ತು ರಾಜೀಬ್ ಭಟ್ಟಾಚಾರ್ಯ ತ್ರಿಪುರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಭಟ್ಟಾಚಾರ್ಯ ಅವರು ಬಿಜೆಪಿಯ ತ್ರಿಪುರ ಘಟಕದ ಅಧ್ಯಕ್ಷರಾಗಿದ್ದಾರೆ. ಕೇಸರಿ ಪಕ್ಷವು ಮಿಷನ್ ರಂಜನ್ ದಾಸ್ ಮತ್ತು ಮಾಜಿ ಕೇಂದ್ರ ಸಚಿವ ರಾಮೇಶ್ವರ್ ತೇಲಿ ಅವರನ್ನು ಅಸ್ಸಾಂನಿಂದ ಕಣಕ್ಕಿಳಿಸಿದೆ.
ಒಂಬತ್ತು ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ.
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಾಲಿ ಸದಸ್ಯರು ಲೋಕಸಭೆಗೆ ಆಯ್ಕೆಯಾದ ಕಾರಣ ಹತ್ತು ಸ್ಥಾನಗಳು ತೆರವಾಗಿದ್ದವು.
ತೆಲಂಗಾಣ ಮತ್ತು ಒಡಿಶಾದ ಎರಡು ಸ್ಥಾನಗಳಿಗೂ ಉಪಚುನಾವಣೆ ನಡೆಯುತ್ತಿದೆ.
Advertisement