ಮುಂಬೈ: ಥಾಣೆ ಜಿಲ್ಲೆಯ ಖಾಸಗಿ ಶಾಲೆಯ ನರ್ಸರಿ ತರಗತಿಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಬದ್ಲಾಪುರ್‌ನಲ್ಲಿ ನಿನ್ನೆ ಮಂಗಳವಾರ ನಡೆದ ತೀವ್ರ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದ್ದು, ರಾಜ್ಯ ಸರ್ಕಾರವನ್ನು ಕೆಣಕುವ ಉದ್ದೇಶವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಸೇರಿದ್ದವರಲ್ಲಿ ಹೆಚ್ಚಿನವರು ಹೊರರಾಜ್ಯದವರಾಗಿದ್ದಾರೆ. ಇಲ್ಲಿ ರಾಜಕೀಯ ಮಾಡುತ್ತಿರುವವರಿಗೆ ನಾಚಿಕೆಯಾಗಬೇಕು, ಇದು ಪ್ರತಿಪಕ್ಷಗಳು ನಡೆಸುತ್ತಿರುವ ಕುತಂತ್ರ ಎಂದಿದ್ದಾರೆ.
ಪ್ರತಿಭಟನಾಕಾರರು ಸ್ಥಳೀಯ ನಿವಾಸಿಗಳಲ್ಲದ ಕಾರಣ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾದ ಸ್ಥಳೀಯ ನಿವಾಸಿಗಳು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಸಚಿವ ಗಿರೀಶ್ ಮಹಾಜನ್ ಅವರು ಪ್ರತಿಭಟನಾಕಾರರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡರೂ ಮಣಿಯದಿರುವುದು ರಾಜಕೀಯ ದುರುದ್ದೇಶವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದರರ್ಥ ಅವರು ಸರ್ಕಾರವನ್ನು ಕೆಣಕಲು ನೋಡುತ್ತಿದ್ದಾರೆ. ಕೆಲವು ಪ್ರತಿಭಟನಾಕಾರರು ಮಹಿಳೆಯರಿಗೆ ತಮ್ಮ ಸರ್ಕಾರದ ಪ್ರಮುಖ ಆರ್ಥಿಕ ನೆರವು ಯೋಜನೆಯಾದ 'ಲಡ್ಕಿ ಬಹಿನ್ ಯೋಜನೆ'ಯನ್ನು ಉಲ್ಲೇಖಿಸುವ ಫಲಕಗಳನ್ನು ಹಿಡಿದಿದ್ದರು. ತಮಗೆ ಮಾಸಿಕ 1,500 ರೂಪಾಯಿ ಬೇಡ, ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕು ಎಂದು ಫಲಕಗಳನ್ನು ಹಾಕಲಾಗಿತ್ತು.
ಯಾರಾದರೂ ಈ ರೀತಿ ಪ್ರತಿಭಟನೆ ಮಾಡುತ್ತಾರೆಯೇ, ವಿರೋಧ ಪಕ್ಷದವರು ಸರ್ಕಾರ ಹೆಣ್ಣುಮಕ್ಕಳಿಗೆ ನೀಡುತ್ತಿರುವ ಯೋಜನೆಯಿಂದ ಕುಗ್ಗಿಹೋಗಿದ್ದಾರೆ, ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ ಎಂದರು.
ಪ್ರತಿಭಟನಾಕಾರರು ರೈಲು ಮಾರ್ಗವನ್ನು ತಡೆದಿದ್ದರಿಂದ ಬದ್ಲಾಪುರದಿಂದ ಅಂಬರನಾಥ್ ನಡುವಿನ ರೈಲು ಸೇವೆಯನ್ನು 10 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಕನಿಷ್ಠ 25 ಮಂದಿ ಪೊಲೀಸರು, ರೈಲ್ವೆ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಕನಿಷ್ಠ 72 ಮಂದಿಯನ್ನು ಬಂಧಿಸಿದ್ದು ನಾಲ್ಕು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ.
Advertisement