ನವದೆಹಲಿ: ರೈತರ ಕುಂದುಕೊರತೆಗಳನ್ನು ಸಾರ್ವಕಾಲಿಕವಾಗಿ ಸೌಹಾರ್ದಯುತವಾಗಿ ಪರಿಹರಿಸಲು ಬಹು ಸದಸ್ಯರ ಸಮಿತಿಯನ್ನು ಶೀಘ್ರದಲ್ಲೇ ರಚಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ರೈತರ ಸಮಸ್ಯೆಗಳ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2 ಕ್ಕೆ ಮುಂದೂಡಿದ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು, ರೈತರಿಗೆ ಸಂಬಂಧಿಸಿದ ತಾತ್ಕಾಲಿಕ ಸಮಸ್ಯೆಗಳನ್ನು ಸಮಿತಿಗೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ಆಗಸ್ಟ್ 12 ರ ಆದೇಶವನ್ನು ಅನುಸರಿಸಿ, ಪ್ರತಿಭಟನಾನಿರತ ರೈತರೊಂದಿಗೆ ಸಭೆ ನಡೆಸಿ, ನಿರ್ಬಂಧಿಸಲಾದ ಹೆದ್ದಾರಿಯನ್ನು ಭಾಗಶಃ ತೆರವುಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದು ಪಂಜಾಬ್ ಸರ್ಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ನ್ಯಾಯಪೀಠವು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳನ್ನು ಪ್ರತಿಭಟನಾನಿರತ ರೈತರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರ ಟ್ರಾಕ್ಟರ್ ಮತ್ತು ಟ್ರಾಲಿಗಳನ್ನು ಹೆದ್ದಾರಿಯಿಂದ ತೆರವುಗೊಳಿಸಲು ಮನವೊಲಿಸುವಂತೆ ಸೂಚಿಸಿದೆ.
ಫೆಬ್ರವರಿ 13 ರಿಂದ ಪ್ರತಿಭಟನಾ ನಿರತ ರೈತರು ಅಂಬಾಲ ಬಳಿಯ ಶಂಭು ಗಡಿಯಲ್ಲಿ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ಒಂದು ವಾರದೊಳಗೆ ತೆಗೆದುಹಾಕುವಂತೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
'ಸಂಯುಕ್ತ ಕಿಸಾನ್ ಮೋರ್ಚಾ' (ರಾಜಕೀಯೇತರ) ಮತ್ತು 'ಕಿಸಾನ್ ಮಜ್ದೂರ್ ಮೋರ್ಚಾ' ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ನಂತರ ಹರಿಯಾಣ ಸರ್ಕಾರ ಫೆಬ್ರವರಿಯಲ್ಲಿ ಅಂಬಾಲಾ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿತ್ತು.
Advertisement