ನವದೆಹಲಿ: ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಲ್ಯಾಟರಲ್ ಎಂಟ್ರಿ ನೇಮಕಾತಿಗಳ ಬಗ್ಗೆ ಜಾಹೀರಾತು ಹಿಂತೆಗೆದುಕೊಂಡ ನಂತರ ಪ್ರಧಾನಿ ಮೋದಿಯವರು ವಿದೇಶಿ ಪ್ರವಾಸ ಮುಗಿಸಿ ಬಂದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಮುಂದಿನ ನಡೆ ಬಗ್ಗೆ ಚರ್ಚಿಸಲು ಮಿತ್ರಪಕ್ಷಗಳ ಸಭೆಯನ್ನು ಕರೆಯುವ ಸಾಧ್ಯತೆಯಿದೆ.
ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯಲ್ಲಿ ಮೀಸಲಾತಿ ಕೊರತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಆಡಳಿತದಲ್ಲಿ ತಜ್ಞರ ಗುತ್ತಿಗೆ ನೇಮಕಾತಿಯಲ್ಲಿಯೂ ಪ್ರಮಾಣಾನುಸಾರ ಮೀಸಲಾತಿ ಸೌಲಭ್ಯವನ್ನು ಒಳಗೊಂಡಿರುವ ಹೊಸ ಕ್ರಮದ ಬಗ್ಗೆ ಸರ್ಕಾರವು ಹೊರಡಿಸುವ ಹೊಸ ಜಾಹೀರಾತಿನಲ್ಲಿ ನಿರ್ಧಾರವಾಗಲಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಸರ್ಕಾರದ ಹಿರಿಯ ಮೂಲವೊಂದು ವಿವಾದವನ್ನು ಪರಿಹರಿಸಲು ಸರ್ಕಾರವು ಸಿದ್ಧವಾಗಿದ್ದು, ಹೊಸ ವಿಧಾನವನ್ನು ಪರಿಗಣಿಸಬಹುದು ಎಂದು ಸೂಚಿಸಿದೆ.
ಹಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆಯಿರುವುದರಿಂದ, ವಿರೋಧ ಪಕ್ಷಗಳು ಇದನ್ನು ವಿವಾದ ಮಾಡುವ ಸಾಧ್ಯತೆಯಿರುವುದರಿಂದ ಲ್ಯಾಟರಲ್ ಎಂಟ್ರಿ ಮೂಲಕ ಗುತ್ತಿಗೆ ಆಧಾರದ ಮೇಲೆ ತಜ್ಞರ ನೇಮಕಾತಿಯಲ್ಲಿ ಮೀಸಲಾತಿಗಳನ್ನು ಅನ್ವಯಿಸುವುದನ್ನು ಸರ್ಕಾರವು ಖಚಿತಪಡಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಪ್ರಸ್ತಾವಿತ ಬದಲಾವಣೆಗಳು ಆಡಳಿತದಲ್ಲಿ ನುರಿತ ವ್ಯಕ್ತಿಗಳ ಅಗತ್ಯವನ್ನು ಸಮಾನ ಪ್ರಾತಿನಿಧ್ಯದ ತತ್ವಗಳೊಂದಿಗೆ ಸಮತೋಲನಗೊಳಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ಈ ತಿಂಗಳು ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರವು ಹೊಸ ಅಧಿಸೂಚನೆಯನ್ನು ಹೊರಡಿಸಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಪ್ರಧಾನಿ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಎಸ್ಸಿ / ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಅರ್ಹ ವೃತ್ತಿಪರರಿಗೆ ಉಡುಗೊರೆಯಾಗಿ ಹೊಸ ಕ್ರಮವು ಬರುವ ಸಾಧ್ಯತೆಯಿದೆ ಎಂದು ಬಿಜೆಪಿಯ ಹಿರಿಯ ಕಾರ್ಯಕಾರಿಯೊಬ್ಬರು ಹೇಳುತ್ತಾರೆ.
ಸರ್ಕಾರವು ಆಗಸ್ಟ್ 17 ರ ಜಾಹೀರಾತನ್ನು ಹಿಂತೆಗೆದುಕೊಂಡ ಕೂಡಲೇ, ಬಿಜೆಪಿ ಐಟಿ ಮುಖ್ಯಸ್ಥ ಮತ್ತು ಹಿರಿಯ ನಾಯಕ ಅಮಿತ್ ಮಾಳವಿಯಾ, ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಲ್ಯಾಟರಲ್ ಪ್ರವೇಶ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ, ರದ್ದುಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
Advertisement