
ರಾಯಪುರ: ಮಾರ್ಚ್ 2026 ರ ವೇಳೆಗೆ ಭಾರತ ಎಡಪಂಥೀಯ ಉಗ್ರವಾದದಿಂದ (LWE) ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರತಿಪಾದಿಸಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾವೋವಾದಿ ಸಮಸ್ಯೆ ಪರಾಮರ್ಶೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾ, ಹಿಂಸಾಚಾರವನ್ನು ದೂರವಿಡುವಂತೆ ನಕ್ಸಲರನ್ನು ಒತ್ತಾಯಿಸಿದರು.
ಛತ್ತೀಸ್‌ಗಢ ಸರ್ಕಾರ 1-2 ತಿಂಗಳಲ್ಲಿ ಹೊಸ ರೂಪದ ಶರಣಾಗತಿ ನೀತಿಯನ್ನು ಪ್ರಕಟಿಸಲಿದೆ. ನಕ್ಸಲರ ವಿರುದ್ಧ ಅಂತಿಮ ದಾಳಿಯನ್ನು ಪ್ರಾರಂಭಿಸಲು ಬಲವಾದ ಮತ್ತು ನಿರ್ದಯ ತಂತ್ರದ ಅಗತ್ಯವಿದೆ ಎಂದು ಅವರು ಹೇಳಿದರು.
ನಕ್ಸಲ್ ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ. ದೇಶದಲ್ಲಿ ಸುಮಾರು 17,000 ಜನರನ್ನು ಬಲಿ ತೆಗೆದುಕೊಂಡಿದೆ. 2004-14ಕ್ಕೆ ಹೋಲಿಸಿದರೆ 2014-24ರ ಅವಧಿಯಲ್ಲಿ ನಕ್ಸಲ್ ಘಟನೆಗಳಲ್ಲಿ ಶೇ.53ರಷ್ಟು ಇಳಿಕೆಯಾಗಿದೆ. ಬಲವಾದ ತಂತ್ರದೊಂದಿಗೆ ಎಡಪಂಥೀಯ ಉಗ್ರವಾದದ ಸಮಸ್ಯೆ ಪರಿಹಾರಕ್ಕೆ ಇದು ಸೂಕ್ತ ಸಮಯವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಜೊತೆಗೆ ಭದ್ರತೆ ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಭದ್ರತಾ ಪಡೆಗಳ ಜೊತೆಗೆ, NIA ಮತ್ತು ED ನಂತಹ ಕೇಂದ್ರೀಯ ಏಜೆನ್ಸಿಗಳು ಮಾವೋವಾದಿಗಳನ್ನು ಕಿತ್ತೊಗೆಯ್ಯುವ ಕೆಲಸ ಮಾಡುತ್ತಿವೆ. ಮಾರ್ಚ್ 2026 ರ ವೇಳೆಗೆ ಎಡಪಂಥೀಯ ಉಗ್ರವಾದದಿಂದ ದೇಶವನ್ನು ಮುಕ್ತಗೊಳಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ ಎಂದರು.
Advertisement