ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ, FIR ದಾಖಲು
ಕೊಚ್ಚಿ: ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಬಂಗಾಳಿ ನಟಿ ಶ್ರೀಲೇಖಾ ಮಿತ್ರ ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ. 2009 ರಲ್ಲಿ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ರಂಜಿತ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.
ರಂಜಿತ್ ನಿರ್ದೇಶನದ 'ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಾಠಕತಿಂತೆ ಕಥೆ' ಚಿತ್ರದಲ್ಲಿ ನಟಿಸಲು ಆಹ್ವಾನಿಸಿದಾಗ ಕೊಚ್ಚಿಯ ಡಿಡಿ ಫ್ಲಾಟ್‌ನಲ್ಲಿ ಈ ಘಟನೆ ನಡೆದಿತ್ತು ಎಂದು ಶ್ರೀಲೇಖಾ ಇಮೇಲ್ ಮೂಲಕ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.
ರಂಜಿತ್ ವಾಸವಿದ್ದ ಕೊಚ್ಚಿಯ ಕಾಲೂರ್-ಕಡವಂತ್ರದ ಫ್ಲಾಟ್‌ನಲ್ಲಿ ಸಿನಿಮಾ ಚರ್ಚೆ ವೇಳೆ, ನನ್ನ ಕೈ ಹಿಡಿದುಕೊಂಡು ಲೈಂಗಿಕ ಉದ್ದೇಶದಿಂದ ದೇಹದ ಇತರ ಭಾಗಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದರು. ಅವರ ಉದ್ದೇಶಗಳು ಸರಿಯಿಲ್ಲ ಎಂದು ಅರಿತು ಅಲ್ಲಿಂದ ತಪ್ಪಿಸಿಕೊಂಡು ಹೋಟೆಲ್‌ಗೆ ಮರಳಿದೆ. ಅಂದೇ ಚಿತ್ರಕಥೆಗಾರ ಜೋಶಿ ಜೋಸೆಫ್ ಅವರೊಂದಿಗೆ ಆ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದೆ. ಕೋಲ್ಕತ್ತಾದಿಂದ ಬಂದಿದ್ದ ಕಾರಣ ಅಪರಾಧ ಮಾಡುವ ಸಮಯದಲ್ಲಿ ನಿರ್ದೇಶಕರ ವಿರುದ್ಧ ಕಾನೂನು ಕ್ರಮವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ ಎಂದು ಶ್ರೀ ಲೇಖಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಸ್ವೀಕರಿಸಿರುವುದನ್ನು ದೃಢಪಡಿಸಿರುವ ಕೊಚ್ಚಿ ನಗರ ಪೊಲೀಸ್ ಆಯುಕ್ತ ಎಸ್ ಶ್ಯಾಮ್ ಸುಂದರ್, "ನನ್ನ ವೈಯಕ್ತಿಕ ಇಮೇಲ್‌ಗೆ ದೂರು ಬಂದಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಮುಂದುವರೆದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗಾಗಿ ಮಹಿಳಾ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದ್ದು, ಇದು ಇನ್ನೂ ಅಧಿಕೃತವಾಗಿ ಕಾರ್ಯಪ್ರವೃತ್ತವಾಗಿಲ್ಲ. ಕೊಚ್ಚಿ ಪೊಲೀಸರು ವಿವರವಾದ ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

