
ನವದೆಹಲಿ: ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬುಧವಾರ ಅಮಾನತುಗೊಳಿಸಿದೆ.
ಐಎಂಎ ಕೋಲ್ಕತ್ತಾ ಘಟಕದ ಉಪಾಧ್ಯಕ್ಷರಾಗಿರುವ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಸಂಘದ ಶಿಸ್ತು ಸಮಿತಿ ತೆಗೆದುಕೊಂಡಿದೆ.
ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಅವರು ರಚಿಸಿದ್ದ ಶಿಸ್ತು ಸಮಿತಿಯು ಬುಧವಾರ ಸ್ವಯಂ ಪ್ರೇರಿತವಾಗಿ ಸ್ನಾತಕೋತ್ತರ ನಿವಾಸಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಬೆಳವಣಿಗೆಗಳನ್ನು ಪರಿಗಣಿಸಿ ಡಾ.ಸಂದೀಪ್ ಘೋಷ್ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಆದೇಶದಲ್ಲಿ ತಿಳಿಸಿದೆ.
ಅಶೋಕನ್ ಅವರು ಐಎಂಎ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಂತ್ರಸ್ತೆಯ ಪೋಷಕರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಮರುದಿನ ಅಪರಾಧಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಲಾಗಿದ್ದು, ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
ಈ ಭೀಕರ ಕೃತ್ಯವನ್ನು ಖಂಡಿಸಿ ವೈದ್ಯರು ಮತ್ತು ಸಾರ್ವಜನಿಕರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು.
Advertisement