ಮುಂಬೈ: ಭಾರತದಲ್ಲಿ ಯಾವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಅಂಶವೊಂದನ್ನು ಬಹಿರಂಗಗೊಳಿಸಿದ್ದಾರೆ.
2024 ನೇ ಸಾಲಿನ ಎಫ್ಐಸಿಸಿಐ ರಸ್ತೆ ಸುರಕ್ಷತಾ ಪ್ರಶಸ್ತಿ ಹಾಗೂ ಕಾನ್ಕ್ಲೇವ್ ನಲ್ಲಿ ಆ.28 ರಂದು ಮಾತನಾಡಿರುವ ನಿತಿನ್ ಗಡ್ಕರಿ, ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಜೀವ ಹಾನಿ ಸಂಭವಿಸುತ್ತಿರುವುದು ಯುದ್ಧ, ಉಗ್ರವಾದ, ನಕ್ಸಲ್ ವಾದಗಳಿಂದ ಅಲ್ಲ ಎಂದು ಹೇಳಿದ್ದಾರೆ.
ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಅತ್ಯಂತ ಕಳಪೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಗಳ ಪರಿಣಾಮ blackspot (ಬ್ಲ್ಯಾಕ್ ಸ್ಪಾಟ್) ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು, ಯುದ್ಧ, ಭಯೋತ್ಪಾದನೆ, ನಕ್ಸಲರ ದಾಳಿಯಲ್ಲಿ ಸಂಭವಿಸುವುದಕ್ಕಿಂತಲೂ ಹೆಚ್ಚಿನ ಜೀವ ಹಾನಿ ರಸ್ತೆ ಅಪಘಾತದಲ್ಲಿ ಸಂಭವಿಸುತ್ತಿದೆ ಎಂದು ಹೇಳಿದ್ದಾರೆ.
ಗಡ್ಕರಿ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ ಸರಾಸರಿ 5 ಲಕ್ಷ ಅಪಘಾತಗಳು ಉಂಟಾಗಿ, 1.5 ಲಕ್ಷ ಸಾವುಗಳು ಸಂಭವಿಸುತ್ತವೆ, 3 ಲಕ್ಷ ಜನರು ಗಾಯಗೊಳ್ಳುತ್ತಾರೆ ಎಂಬ ಅಂಕಿ-ಅಂಶ ಮುಂದಿಟ್ಟಿದ್ದಾರೆ.
ಈ ರೀತಿಯ ರಸ್ತೆ ಅಪಘಾತ, ಜೀವಹಾನಿಯ ಕಾರಣದಿಂದಾಗಿ ದೇಶದ ಜಿಡಿಪಿಗೆ ಶೇ.3 ರಷ್ಟು ನಷ್ಟ ಉಂಟಾಗುತ್ತದೆ. ಬಲಿ ಕೊಡುವ ಕುರಿಯ ಮಾದರಿಯಲ್ಲಿ ಪ್ರತಿ ಅಪಘಾತಗಳಿಗೂ ಚಾಲಕನನ್ನು ದೂರಲಾಗುತ್ತದೆ. ಆದರೆ ನಿಮಗೆ ಹೇಳುತ್ತೇನೆ, ರಸ್ತೆ ಎಂಜಿನಿಯರಿಂಗ್ ನಲ್ಲಿ ದೋಷವಿದೆ ಎಂದು ಗಡ್ಕರಿ ಹೇಳಿದ್ದಾರೆ. ಎಲ್ಲಾ ಹೆದ್ದಾರಿಗಳ ಸುರಕ್ಷತೆಗೆ ಸಂಬಂಧಪಟ್ಟ ಆಡಿಟ್ ನಡೆಸುವ ಅಗತ್ಯವನ್ನು ಸಚಿವರು ಇದೇ ವೇಳೆ ಒತ್ತಿ ಹೇಳಿದರು. ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಾವು ಲೇನ್ ಶಿಸ್ತನ್ನು ಅನುಸರಿಸಬೇಕು ಎಂದೂ ಸಚಿವರು ಕರೆ ನೀಡಿದ್ದಾರೆ.
Advertisement