ನವದೆಹಲಿ: ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಂಪುಕೋಟೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಭಾಷಣ ಮಾಡಿದ್ದಾರೆ. ಆದರೆ ಅವರ ಸರ್ಕಾರ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಯಾವುದೇ ಕಾಂಕ್ರೀಟ್ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಮಹಿಳೆಯರ ಮೇಲಿನ ಅಪರಾಧಗಳು ಗಂಭೀರ ಸಮಸ್ಯೆಯಾಗಿದ್ದು, ಈ ಅಪರಾಧಗಳನ್ನು ತಡೆಯುವುದು ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.
"ನಾವೆಲ್ಲರೂ ಒಗ್ಗೂಡಬೇಕು ಮತ್ತು ಸಮಾಜದ ಪ್ರತಿಯೊಂದು ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು" ಎಂದು ಕಾಂಗ್ರೆಸ್ ಮುಖ್ಯಸ್ಥರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮತ್ತು ದೇಶದ ಇತರ ಭಾಗಗಳಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳ ಕುರಿತು ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಖರ್ಗೆ ಅವರು ಈ ಪೋಸ್ಟ್ ಮಾಡಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಪ್ರತಿ ಗಂಟೆಗೆ 43 ಪ್ರಕರಣಗಳು ದಾಖಲಾಗುತ್ತಿವೆ. ನಮ್ಮ ದೇಶದ ಅತ್ಯಂತ ದುರ್ಬಲ ದಲಿತ-ಬುಡಕಟ್ಟು ವರ್ಗದ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಪ್ರತಿದಿನ 22 ಅಪರಾಧಗಳು ದಾಖಲಾಗುತ್ತಿವೆ. ಭಯ, ಬೆದರಿಕೆ, ಸಾಮಾಜಿಕ ಕಾರಣಗಳಿಂದ ಇನ್ನೂ ಹಲವು ಅಪರಾಧಗಳು ದಾಖಲಾಗುವುದಿಲ್ಲ” ಎಂದು ಖರ್ಗೆ ಹೇಳಿದ್ದಾರೆ.
"ನಾವು ಮಹಿಳೆಯ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದೇವೆಯೇ? ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸುಧಾರಿಸಿದೆಯೇ? ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳು ಈಗ ಸುರಕ್ಷಿತ ವಾತಾವರಣದಲ್ಲಿ ಬದುಕಲು ಸಮರ್ಥವಾಗಿವೆಯೇ?" ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದ್ದಾರೆ.
ಪ್ರತಿ ಗೋಡೆಯ ಮೇಲೆ ಬರೆಯಲಾಗಿರುವ "ಬೇಟಿ ಬಚಾವೋ" ಪೇಂಟಿಂಗ್ ಸಾಮಾಜಿಕ ಬದಲಾವಣೆಯನ್ನು ತರುತ್ತದೆಯೇ? ಅಥವಾ ಸರ್ಕಾರಗಳ ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿಲ್ಲವೇ? ಸರ್ಕಾರ ಮತ್ತು ಆಡಳಿತ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಲಿಲ್ಲವೇ? ಖರ್ಗೆ ಪ್ರಶ್ನಿಸಿದ್ದಾರೆ.
"2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಪ್ರಕರಣದ ನಂತರ, ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸುಗಳನ್ನು ಇಂದಿಗೂ ಜಾರಿಗೆ ತರಲು ನಮಗೆ ಸಾಧ್ಯವಾಗುತ್ತಿಲ್ಲವೇ?" ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
Advertisement