
ನವದೆಹಲಿ: ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಭಾರಿ ಹಿನ್ನಡೆಯಾಗಿದ್ದು, ವೈಎಸ್‌ಆರ್‌ಸಿಪಿಯ ಇಬ್ಬರು ರಾಜ್ಯಸಭಾ ಸದಸ್ಯರಾದ ಬೀಡಾ ಮಸ್ತಾನ್ ರಾವ್ ಜಾಧವ್ ಮತ್ತು ವೆಂಕಟರಮಣ ರಾವ್ ಮೋಪಿದೇವಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಂಸದೀಯ ಮೂಲಗಳು ಶುಕ್ರವಾರ ತಿಳಿಸಿವೆ.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ವೈಎಸ್‌ಆರ್‌ಸಿಪಿಯ ಇಬ್ಬರು ಸಂಸದರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಸ್ತಾನ್ ರಾವ್ ಅವರ ಅವಧಿ ಜೂನ್ 2028 ರಲ್ಲಿ ಕೊನೆಗೊಳ್ಳಲಿದ್ದು, ಟಿಡಿಪಿಯಿಂದ ವೈಎಸ್‌ಆರ್‌ಸಿಪಿಗೆ ಬಂದಿದ್ದರು. ಈಗ ಮತ್ತೆ ಟಿಡಿಪಿಗೆ ಹೋಗುವ ಸಾಧ್ಯತೆ ಇದೆ.
ಇನ್ನು ಮೋಪಿದೇವಿ ಅವರ ರಾಜ್ಯಸಭಾ ಅವಧಿ ಜೂನ್ 2026 ರವರೆಗೆ ಇದ್ದು, ಅವರು ಸಹ ಟಿಡಿಪಿಗೆ ಸೇರಬಹುದು ಎಂದು ಮೂಲಗಳು ತಿಳಿಸಿವೆ.
ಮೋಪಿದೇವಿ ಮತ್ತು ಮಸ್ತಾನ್ ರಾವ್ ಇಬ್ಬರೂ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಈ ಇಬ್ಬರು ನಾಯಕರು ಇತ್ತೀಚೆಗೆ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಟಿಡಿಪಿಯು ಮಸ್ತಾನ್ ರಾವ್ ಅವರನ್ನು ರಾಜ್ಯಸಭೆಗೆ ಮರು ನಾಮನಿರ್ದೇಶನ ಮಾಡಬಹುದು. ಆದರೆ ಮೋಪಿದೇವಿ ಅವರು ಯಾವುದೇ ಷರತ್ತುಗಳಿಲ್ಲದೆ ಟಿಡಿಪಿಗೆ ಸೇರಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement