ಪಾಲ್ಘರ್: ಮಹಾರಾಷ್ಟ್ರದ ಕರಾವಳಿ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಉರುಳಿಬಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಲೆಬಾಗಿ ಕ್ಷಮೆಯಾಚಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಪಾಲಿಗೆ ಕೇವಲ ಒಂದು ಹೆಸರು ಅಥವಾ ರಾಜನಲ್ಲ. ಅವರು ನಮಗೆ ದೇವರು, ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ನನ್ನ ದೇವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಇಂದು ಪಾಲ್ಘಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ನಾನು ಇಲ್ಲಿಗೆ ಬಂದಿಳಿದ ತಕ್ಷಣ, ಪ್ರತಿಮೆ ಕುಸಿತದ ಬಗ್ಗೆ ನಾನು ಮೊದಲು ಶಿವಾಜಿ ಮಹಾರಾಜರಲ್ಲಿ ಕ್ಷಮೆಯಾಚಿಸಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ತಮ್ಮ ದೇವರು ಎಂದು ಪರಿಗಣಿಸಿದವರಿಗೆ ಮತ್ತು ತೀವ್ರ ಘಾಸಿಗೊಂಡವರಿಗೆ ನಾನು ನನ್ನ ಶಿರಬಾಗಿ ಕ್ಷಮೆ ಯಾಚಿಸುತ್ತೇನೆ. ನಮ್ಮ ಮೌಲ್ಯಗಳು ವಿಭಿನ್ನ. ನಮಗೆ ನಮ್ಮ ದೇವರಿಗಿಂತ ದೊಡ್ಡದು ಯಾವುದೂ ಇಲ್ಲ" ಎಂದು ಹೇಳಿದರು.
ಸಿಂಧುದುರ್ಗ ಜಿಲ್ಲೆಯ ಮಲ್ವಾನ್ ತೆಹಸಿಲ್‌ನ ಕರಾವಳಿ ರಾಜ್‌ಕೋಟ್ ಕೋಟೆಯಲ್ಲಿ ಸ್ಥಾಪಿಸಲಾಗಿದ್ದ ಶಿವಾಜಿ ಮಹಾರಾಜರ 35 ಅಡಿ ಎತ್ತರದ ವಿಗ್ರಹವು ಆಗಸ್ಟ್ 26ರಂದು ಮುರಿದುಬಿದ್ದಿತ್ತು. ಭಾರಿ ಮಳೆ ಮತ್ತು ಗಾಳಿಯಿಂದಾಗಿ ಪ್ರತಿಮೆ ಉರುಳಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿಸೆಂಬರ್‌ನಲ್ಲಿ ರಾಜ್‌ಕೋಟ್ ಕೋಟೆಯಲ್ಲಿ ಈ ಪ್ರತಿಮೆಯನ್ನು ಉದ್ಘಾಟಿಸಿದ್ದರು.
ಪ್ರತಿಮೆ ಉದ್ಘಾಟನೆಯಾಗಿ ವರ್ಷದೊಳಗೆ ಕುಸಿದು ಬಿದ್ದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಮೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಎಂವಿಎ, ಸಿಎಂ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆಗೆ ಆಗ್ರಹಿಸಿತ್ತು.
Advertisement