ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್, ಪಾಕಿಸ್ತಾನದ ಕುರಿತ ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದು, ಅಡೆತಡೆಯಿಲ್ಲದ ಮಾತುಕತೆಯ ಕಾಲ ಮುಗಿದಿದೆ ಎಂದು ಹೇಳಿದ್ದಾರೆ.
ಆದರೆ ತಮ್ಮ ಸರ್ಕಾರ ಗಡಿಯಾಚೆಗಿನ ನಕಾರಾತ್ಮಕ ಹಾಗೂ ಸಕಾರಾತ್ಮಕ ಬೆಳವಣಿಗೆಗಳಿಗೆ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ ಎಂದು ಜೈಶಂಕರ್ ಇದೇ ವೇಳೆ ಹೇಳಿದ್ದಾರೆ.
ಈ ವಾರ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ, ಮಾತನಾಡಿರುವ ಜೈಶಂಕರ್, ಪಾಕಿಸ್ತಾನಕ್ಕೆ ಮತ್ತು ಭಾರತದ ಮೇಲಿನ ಭಯೋತ್ಪಾದಕ ದಾಳಿಯನ್ನು ಬೆಂಬಲಿಸುವವರಿಗೆ ಕಠಿಣವಾದ "ಕ್ರಮಗಳು ಪರಿಣಾಮಗಳನ್ನು ಉಂಟುಮಾಡುತ್ತವೆ" ಎಂದು ಎಚ್ಚರಿಕೆ ನೀಡಿದರು. ನಾವು ಪಾಕಿಸ್ತಾನದೊಂದಿಗೆ ಯಾವ ರೀತಿಯ ಸಂಬಂಧವನ್ನು ಆಲೋಚಿಸಬಹುದು...?" ಎಂದು ಅವರು ಪಾಕಿಸ್ತಾನದೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಭಾರತವು ಸಂಬಂಧವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ತೃಪ್ತವಾಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಬಹುಶಃ ಹೌದು, ಬಹುಶಃ ಇಲ್ಲ... ಆದರೆ ನಾನು ಹೇಳಲು ಬಯಸುವುದು ನಾವು ನಿಷ್ಕ್ರಿಯರಲ್ಲ, ಮತ್ತು ಧನಾತ್ಮಕ ಅಥವಾ ಋಣಾತ್ಮಕ ಘಟನೆಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ". ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಗಡಿ ವಿವಾದಗಳಿಂದ ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧ ಅಸ್ಥಿರವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯ ಆರ್ಥಿಕ ಮತ್ತು ವ್ಯವಸ್ಥಾಪನೆಗಳಿಗೆ ಪಾಕಿಸ್ತಾನದ ಬೆಂಬಲದ ಬಗ್ಗೆ ಭಾರತ ಆಗಾಗ್ಗೆ ಕಳವಳ ವ್ಯಕ್ತಪಡಿಸಿದೆ. ದ್ವಿಪಕ್ಷೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಇವುಗಳ ಬಗ್ಗೆ ಪ್ರಸ್ತಾಪಿಸಿದೆ.
ಮಾರ್ಚ್‌ನಲ್ಲಿ ಶ್ರೀ ಜೈಶಂಕರ್, ಸಿಂಗಾಪುರಕ್ಕೆ ಭೇಟಿ ನೀಡಿದಾಗ, ಭಯೋತ್ಪಾದನೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಪಾಕಿಸ್ತಾನದ "ಬಹುತೇಕ ಉದ್ಯಮ-ಮಟ್ಟದ" ಪ್ರಾಯೋಜಕತ್ವದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
Advertisement