ತಿರುಪತಿ: ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟೋಕನ್ ರಹಿತ ಭಕ್ತರಿಗೆ ಲಡ್ಡುಗಳ ಮಾರಾಟಕ್ಕೆ ಆಧಾರ್ ದೃಢೀಕರಣವನ್ನು ಪರಿಚಯಿಸಿದೆ. ಲಡ್ಡು ಮಾರಾಟವನ್ನು ಹೆಚ್ಚು ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ಹೊಸ ವ್ಯವಸ್ಥೆ ಗುರುವಾರದಿಂದ ಜಾರಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಉದ್ದೇಶಿಸಿ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ ವೆಂಕಯ್ಯ ಚೌಧರಿ, ಸಾಮಾನ್ಯ ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲವು ಮಧ್ಯವರ್ತಿಗಳು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಾಳಸಂತೆಯಲ್ಲಿ ಲಡ್ಡುಗಳನ್ನು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ನಿಲ್ಲಿಸಲು, ದರ್ಶನ ಟೋಕನ್ ಇಲ್ಲದ ಭಕ್ತರು ಎರಡು ಲಡ್ಡುಗಳನ್ನು ಪಡೆಯಲು ಲಡ್ಡು ಕೌಂಟರ್‌ಗಳಲ್ಲಿ ತಮ್ಮ ಆಧಾರ್ ಕಾರ್ಡ್ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ದರ್ಶನಕ್ಕೆ ಟಿಕೆಟ್ ಕೊಳ್ಳದೇ 48- 62ನೇ ಕೌಂಟರ್ ನಿಂದ ಬರುವ ಭಕ್ತರಿಗೆ ಇದು ಅನ್ವಯಿಸಲಿದೆ. ಅವರು, ತಮ್ಮ ಆಧಾರ್ ದೃಢೀಕರಣ ಮಾಡಿ, ಒಬ್ಬ ಭಕ್ತರು ಎರಡು ಲಡ್ಡುವನ್ನು ಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ದರ್ಶನ ಟೋಕನ್‌ಗಳು ಅಥವಾ ಟಿಕೆಟ್‌ಗಳೊಂದಿಗೆ ಬರುವ ಭಕ್ತರಿಗೆ ಲಡ್ಡು ಪ್ರಸಾದ ನೀಡಲು ಯಾವುದೇ ಬದಲಾವಣೆಗಳಿಲ್ಲ. ಅವರು ಹಿಂದಿನಂತೆ ಒಂದುಲಡ್ಡು ಉಚಿತವಾಗಿ ಪಡೆದು ಹೆಚ್ಚುವರಿ ಲಡ್ಡುಗಳನ್ನು ಹಣ ಕೊಟ್ಟು ಖರೀದಿಸುವುದನ್ನು ಮುಂದುವರಿಸಬಹುದು ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ ವೆಂಕಯ್ಯ ಚೌಧರಿ, ಲಡ್ಡು ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು, ಭಕ್ತರು ಸುಳ್ಳು ವದಂತಿಗಳನ್ನು ನಂಬಬೇಡಿ ಮತ್ತು ಈ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ಟಿಟಿಡಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
Advertisement