
ನವದೆಹಲಿ: ನಾಲ್ಕನೇ ಮಗುವೂ ಹೆಣ್ಣಾಯಿತು ಎಂದು ಹೆತ್ತ ತಾಯಿಯೇ ತನ್ನ ಆರು ದಿನದ ಹೆಣ್ಣು ಮಗುವನ್ನು ಕೊಂದು ಶವವನ್ನು ಪಕ್ಕದ ಮನೆಯ ಛಾವಣಿಯ ಮೇಲೆ ಎಸೆದಿರುವ ಘಟನೆ ಪಶ್ಚಿಮ ದೆಹಲಿಯ ಖಯಾಲಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮತ್ತೆ ಹೆಣ್ಣು ಮಗು ಜನಿಸಿದ್ದರಿಂದ ತಾನು ಸಾಮಾಜಿಕ ಕಳಂಕಕ್ಕೆ ಗುರಿಯಾಗಬಹುದು ಎಂದು ಭಾವಿಸಿದ 28 ವರ್ಷದ ಮಹಿಳೆ ತನ್ನ ಆರು ದಿನದ ಮಗಳನ್ನು ಹತ್ಯೆ ಮಾಡಿದ್ದಾಳೆ.
"ಬಳಿಕ ಶುಕ್ರವಾರ ಬೆಳಗ್ಗೆ 5.30ರ ಸುಮಾರಿಗೆ ಪಿಸಿಆರ್ ಕರೆ ಮಾಡಿದ ಮಹಿಳೆ, ತನ್ನ ಆರು ದಿನದ ಹೆಣ್ಣು ಮಗು ನಾಪತ್ತೆಯಾಗಿದೆ ಎಂದು ದೂರಿದ್ದಾಳೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿದ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಹೋಗಿದ್ದಾರೆ" ಎಂದು ಉಪ ಪೊಲೀಸ್ ಆಯುಕ್ತ(ಪಶ್ಚಿಮ) ) ವಿಚಿತ್ರ ವೀರ್ ಅವರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ತಾಯಿ ಶಿವಾನಿ ಅವರು ಹಿಂದಿನ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ಪೋಷಕರೊಂದಿಗೆ ಮನೆಗೆ ಮರಳಿದ್ದಾರೆ. ಮಧ್ಯರಾತ್ರಿ ಎರಡು ಗಂಟೆಗೆ ಮಗುವಿಗೆ ಹಾಲು ಕುಡಿಸಿ ಮಲಗಿಸಿದ್ದೆ. ಬೆಳಗ್ಗೆ 4.30ಕ್ಕೆ ಎಚ್ಚರವಾದಾಗ ಮಗು ಇರಲಿಲ್ಲ ಎಂದು ತಿಳಿಸಿದ್ದರು ಎಂದು ವಿಚಿತ್ರ ವೀರ್ ಹೇಳಿದ್ದಾರೆ.
ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಹತ್ತಿರದ ಮನೆಗಳಲ್ಲಿ ಶೋಧ ನಡೆಸಲು ತಂಡವನ್ನು ರಚಿಸಿದ್ದಾರೆ.
ಪೊಲೀಸರು ಮಗುವಿಗೆ ಹುಡುಕಾಟ ನಡೆಸುವಾಗ ತಾಯಿ ಶಿವಾನಿ, ಶಸ್ತ್ರಚಿಕಿತ್ಸೆಯ ಹೋಲಿಗೆ ಬಿಚ್ಚಿಸಿಕೊಳ್ಳಲು ಆಸ್ಪತ್ರೆಗೆ ಹೋಗಬೇಕಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆಕೆ ನಡೆ ಪೊಲೀಸರಿಗೆ ಅನುಮಾನ ಮೂಡಿಸಿದ್ದರೂ ವೈದ್ಯಕೀಯ ಕಾರಣದಿಂದ ಆಕೆಗೆ ಹೋಗಲು ಅನುಮತಿ ನೀಡಿದ್ದರು.
ಶೋಧದ ವೇಳೆ ಪಕ್ಕದ ಮನೆಯ ಛಾವಣಿ ಮೇಲೆ ಬ್ಯಾಗ್ವೊಂದು ಪತ್ತೆಯಾಗಿದ್ದು, ಅದರಲ್ಲಿ ಮಗು ಇರುವುದು ಕಂಡು ಬಂದಿತ್ತು. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಮಗು ಅಸುನೀಗಿತ್ತು ಎಂದು ವೀರ್ ತಿಳಿಸಿದ್ದಾರೆ.
ತಾಯಿಯ ನಡೆ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರ ತಂಡವೊಂದು ಶಿವಾನಿ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಕೃತ್ಯವನ್ನು ತಾಯಿಯೇ ಎಸಗಿರುವುದು ಬಹಿರಂಗಗೊಂಡಿದೆ. ಮೃತಪಟ್ಟಿರುವ ಮಗುವು ತನ್ನ ನಾಲ್ಕನೇ ಮಗುವಾಗಿದ್ದು, ಈಗಾಗಲೇ ಎರಡು ಕೂಸುಗಳು ಸಾವನ್ನಪ್ಪಿವೆ. ಸಾಮಾಜಿಕ ಕಳಂಕದ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಮಗುವಿಗೆ ಹಾಲು ಕುಡಿಸುವಾಗ ಶಿವಾನಿ ಮಗುವನ್ನು ಸಾಯಿಸಿ, ಪಕ್ಕದ ಮನೆಯ ಛಾವಣಿ ಮೇಲೆ ಎಸೆದಿದ್ದಾಳೆ. ಈ ವಿಷಯ ಕುಟುಂಬಕ್ಕೆ ಗೊತ್ತಾದರೆ ಏನಾಗಲಿದೆ ಎಂಬ ಆತಂಕದಿಂದ ಮಗು ಕಣ್ಮರೆ ಆಗಿದೆ ಎಂದು ನಾಟಕವಾಡಿದ್ದಾಗಿ ತಿಳಿಸಿದ್ದಾಳೆ. ಪ್ರಕರಣದ ಸಂಬಂಧ ತಾಯಿ ಶಿವಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
Advertisement