
ಡೆಹ್ರಾಡೂನ್: ವಿಡಿಯೊ ನೋಡಿದರೆ ಝಲ್ಲೆನ್ನಿಸುವ ಘಟನೆಯಲ್ಲಿ, ಇಂದು ಶನಿವಾರ ಬೆಳಗ್ಗೆ ಎಂಐ-17 ಹೆಲಿಕಾಪ್ಟರ್ ತೆರಳುತ್ತಿದ್ದ ವೇಳೆ ಹಾರಾಟದ ಮಧ್ಯೆ ಹಠಾತ್ ಸಮತೋಲನ ಕಳೆದುಕೊಂಡು ದುರಸ್ತಿಗೆಂದು ಸಾಗಿಸುತ್ತಿದ್ದ ಹಾನಿಗೊಳಗಾದ ಹೆಲಿಕಾಪ್ಟರ್ ನ್ನು ಉದ್ದೇಶಪೂರ್ವಕವಾಗಿ ಕೆಳಗೆ ಬೀಳಿಸಿದ ಘಟನೆ ನಡೆದಿದೆ. ಮುಂದೆ ಬರಬಹುದಾದ ಅಪಾಯವನ್ನು ಅರಿತ ಪೈಲಟ್ ತಕ್ಷಣ ಕಾರ್ಯಪ್ರವೃತ್ತವಾಗಿ ಹಾಳಾದ ಹೆಲಿಕಾಪ್ಟರ್ ನ್ನು ಕಳಚಿದಾಗ ಅದು ನದಿಯ ಬಳಿ ಬಿದ್ದು ಛಿದ್ರವಾದ ಘಟನೆ ಉತ್ತರಾಖಂಡದ ಕೇದಾರನಾಥ ಬಳಿ ನಡೆದಿದೆ.
ಅದೃಷ್ಟವಶಾತ್, ಪೈಲಟ್‌ನ ಸಮಯ ಪ್ರಜ್ಞೆಯಿಂದ ತ್ವರಿತ ಕ್ರಮದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ದುರಸ್ತಿ ಹೆಲಿಕಾಪ್ಟರ್ ಕ್ರಿಸ್ಟಲ್ ಏವಿಯೇಷನ್ ಕಂಪನಿಗೆ ಸೇರಿದ್ದಾಗಿದೆ.
ನಾವು ಹಾನಿಗೊಳಗಾದ ಹೆಲಿಕಾಪ್ಟರ್ ನ್ನು ಗೌಚಾರ್‌ಗೆ ಎಂಐ-17 ಹೆಲಿಕಾಪ್ಟರ್ ನಲ್ಲಿ ಸಾಗಿಸುತ್ತಿದ್ದೆವು. ಇದ್ದಕ್ಕಿದ್ದಂತೆ ಗಾಳಿಯಲ್ಲಿ ಸಮತೋಲನ ಕಳೆದುಕೊಂಡಿತು. ಅಪಾಯವನ್ನು ಗ್ರಹಿಸಿದ ಪೈಲಟ್, ಖಾಲಿ ಜಾಗವನ್ನು ತ್ವರಿತವಾಗಿ ಸ್ಕಾನ್ ಮಾಡಿ ಹೆಲಿಕಾಪ್ಟರ್ ನ್ನು ಕಣಿವೆಗೆ ಇಳಿಸಿದರು ಎಂದು ಸೇನಾ ಮೂಲಗಳು ತಿಳಿಸಿವೆ.
ಸರ್ಕಾರಿ ಮೂಲಗಳ ಪ್ರಕಾರ, ದುರಸ್ತಿಗಾಗಿ ಸಾಗಿಸಲಾಗುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಗಳಿಂದಾಗಿ ಕಳೆದ ಮೇ 24ರಂದು ತುರ್ತು ಭೂಸ್ಪರ್ಶ ಮಾಡಿತ್ತು. ಇದರ ನಂತರ, ವಿಮಾನವನ್ನು ರಿಪೇರಿಗಾಗಿ ಗೌಚಾರ್ ಏರ್‌ಸ್ಟ್ರಿಪ್‌ಗೆ ಸಾಗಿಸಲಾಗುತ್ತಿತ್ತು, ಇದನ್ನು ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ನಲ್ಲಿ ಸಾಗಿಸಲಾಗುತ್ತಿತ್ತು.
ಮೇ 24 ರಂದು ಕ್ರಿಸ್ಟಲ್ ಏವಿಯೇಷನ್ ಕಂಪನಿಯ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷವು ಕಂಡುಬಂದು ಕೇದಾರನಾಥ ಹೆಲಿಪ್ಯಾಡ್‌ನಿಂದ ತುರ್ತು ಭೂಸ್ಪರ್ಶ ಮಾಡಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದರು ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ರಾಹುಲ್ ಚೌಬೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಇಂದು ಅಪಘಾತಕ್ಕೊಳಗಾದ ಹೆಲಿಕಾಪ್ಟರ್‌ನಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸರಕು ಇರಲಿಲ್ಲ. ಸುದ್ದಿ ತಿಳಿದ ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿತು ಎಂದು ಜಿಲ್ಲಾ ವಿಪತ್ತು ನಿರ್ವಹಣೆ ಕಚೇರಿ ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ ಎಂದು ರಕ್ಷಣಾ ತಂಡದ ವಕ್ತಾರರು ತಿಳಿಸಿದ್ದಾರೆ.
Advertisement