ಮುಂಬೈ: ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿ ಆಯ್ಕೆ ಮಾಡುವ ರಾಜ್ಯದ ನೂತನ ಸಿಎಂಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾನುವಾರ ಹೇಳಿದ್ದಾರೆ ಮತ್ತು ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮಹಾಯುತಿ ಪಾಲುದಾರರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇಂದು ಸತಾರ ಜಿಲ್ಲೆಯ ತಮ್ಮ ಸ್ಥಳೀಯ ಡೇರ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಸರ್ಕಾರ ರಚನೆಯ ಕುರಿತು ಮಾತುಕತೆಗಳು ನಡೆಯುತ್ತಿವೆ ಮತ್ತು ಮಹಾಯುತಿಯ ಮೂರು ಮಿತ್ರಪಕ್ಷಗಳಾದ ಶಿವಸೇನೆ, ಬಿಜೆಪಿ ಮತ್ತು ಎನ್‌ಸಿಪಿ ಒಮ್ಮತದ ಮೂಲಕ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದರು.
ನಾನು ನನ್ನ ಗ್ರಾಮಕ್ಕೆ ಯಾವಾಗಲೂ ಬರುತ್ತಿರುತ್ತೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಮತ್ತು ಕಳೆದ ವಾರ ಸಿಎಂ ಹುದ್ದೆಗೆ ಸಂಬಂಧಿಸಿದಂತೆ ನನ್ನ ನಿಲುವು ಸ್ಪಷ್ಟಪಡಿಸಿದ್ದೇನೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ. ಬಿಜೆಪಿ ಆಯ್ಕೆ ಮಾಡುವ ಸಿಎಂಗೆ ನನ್ನ ಮತ್ತು ಶಿವಸೇನೆಯ ಬೆಂಬಲ ಇರುತ್ತದೆ ಎಂದು ಹೇಳಿದರು.
ಹೊಸ ಸರ್ಕಾರ ರಚನೆಯಾಗುತ್ತಿರುವ ರೀತಿಯಿಂದ ಬೇಸರಗೊಂಡು ತಮ್ಮ ಹಳ್ಳಿಗೆ ಹೋಗಿದ್ದಾರೆ ಎಂಬ ಊಹಾಪೋಹಗಳ ನಡುವೆ ಶುಕ್ರವಾರ ಶಿವಸೇನಾ ನಾಯಕ ಅನಾರೋಗ್ಯಕ್ಕೆ ಒಳಗಾಗಿದ್ದು, ಭಾನುವಾರ ಸಂಜೆ ಮುಂಬೈಗೆ ಮರಳಲಿದ್ದಾರೆ ಎಂದು ಅವರ ಸಹಾಯಕರೊಬ್ಬರು ಶನಿವಾರ ತಿಳಿಸಿದ್ದರು.
ತಮ್ಮ ಆರೋಗ್ಯದ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ಈಗ ಆರೋಗ್ಯವಾಗಿದ್ದೇನೆ. ವಿಶ್ರಾಂತಿ ಪಡೆಯಲು ನನ್ನ ಗ್ರಾಮಕ್ಕೆ ಬಂದಿದ್ದೇನೆ ಎಂದು ಹೇಳಿದರು.
"ಜನರು ಬಯಸುವ ಸರ್ಕಾರವನ್ನು ನಾವು ನೀಡುತ್ತೇವೆ. ಕಳೆದ ಎರಡೂವರೆ ವರ್ಷಗಳಲ್ಲಿ ನಾವು ಮಾಡಿದ ಕೆಲಸಕ್ಕೆ ಪ್ರತಿಫಲವಾಗಿ ಜನರು ನೀಡಿದ ಬೃಹತ್ ಜನಾದೇಶದಿಂದಾಗಿ ನಮ್ಮ ಜವಾಬ್ದಾರಿ ಈಗ ಹೆಚ್ಚಾಗಿದೆ" ಎಂದು ಅವರು ಹೇಳಿದರು.
Advertisement