
ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಸುವುದಕ್ಕೆ ದಿನಾಂಕ ಘೋಷಣೆಯಾಗಿದ್ದು, ಸಂಸತ್ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತಹ ನಿರ್ಣಯಕ್ಕೆ ವಿಪಕ್ಷಗಳು ಬಂದಿವೆ.
ಭಾರತ ತನ್ನ ಸಂವಿಧಾನ ಪಡೆದು 75 ವರ್ಷಗಳಾಗುತ್ತಿದ್ದು, ಈ ಬಗ್ಗೆ ಡಿ.13-14 ರಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದರೆ, ಡಿ.16-17 ರಂದು ರಾಜ್ಯಸಭೆಯಲ್ಲಿ ಚರ್ಚೆಗೆ ದಿನಾಂಕ ಘೋಷಣೆಯಾಗಿದೆ.
ಸಂವಿಧಾನದ ಬಗ್ಗೆ ಚರ್ಚೆ ನಡೆಸುವ ದಿನಾಂಕವನ್ನು ಘೋಷಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಉಭಯ ಸದನಗಳು ಡಿ.03 ರಿಂದ ಸುಗಮವಾಗಿ ನಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವು ಪಕ್ಷಗಳ ನಾಯಕರೊಂದಿಗೆ ಸ್ಪೀಕರ್ ಓಂ ಬಿರ್ಲಾ ಸಭೆ ನಡೆಸಿದ ಫಲಿತವಾಗಿ ವಿಪಕ್ಷಗಳು ಸಂಸತ್ ಕಲಾಪಗಳಿಗೆ ಅಡ್ಡಿಯುಂಟುಮಾಡದೇ ಇರುವುದಕ್ಕೆ ನಿರ್ಧರಿಸಿವೆ ಎಂದು ತಿಳಿದುಬಂದಿದೆ.
ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಪ್ರತಿಪಕ್ಷಗಳ ನಾಯಕರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಭಾಲ್ ಹಿಂಸಾಚಾರ ಮತ್ತು ಮಣಿಪುರದಂತಹ ಇತರ ವಿಷಯಗಳನ್ನು ಪ್ರತಿಪಕ್ಷಗಳು ಎತ್ತುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಿಜಿಜು, ನಿಯಮಗಳಿಗೆ ಅನುಸಾರವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಷ್ಟೇ ಹೇಳಿದ್ದಾರೆ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಕಂಪನಿ ಅಧಿಕಾರಿಗಳ ವಿರುದ್ಧ ಲಂಚ ಮತ್ತು ವಂಚನೆ ಆರೋಪದ ಮೇಲೆ ಯುಎಸ್ ಪ್ರಾಸಿಕ್ಯೂಟರ್‌ಗಳ ದೋಷಾರೋಪಣೆಯ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಸಂಸತ್ ಕಲಾಪಕ್ಕೆ ಅಡ್ದಿ ಪಡಿಸುತ್ತಿದೆ.
Advertisement