
ತಿರುವಣ್ಣಾಮಲೈ: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ತಮಿಳನಾಡಿನ ತಿರುವಣ್ಣಾಮಲೈನಲ್ಲಿ ಭೂ ಕುಸಿತ ಸಂಭವಿಸಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟ ಮತ್ತಿಬ್ಬರ ಶವಗಳನ್ನು ಮಂಗಳವಾರ ಹೊರತೆಗೆಯಲಾಗಿದೆ. ರಕ್ಷಣಾ ತಂಡ ಸೋಮವಾರ ಐವರ ಶವಗಳನ್ನು ಹೊರತೆಗೆದಿತ್ತು.
ಭೂಕುಸಿತದಿಂದಾಗಿ ವಿಒಸಿ ನಗರದ 11ನೇ ಬೀದಿಯಲ್ಲಿ ಅಕ್ಕಪಕ್ಕದ ಎರಡು ಮನೆಗಳು ಮಣ್ಣಿನಲ್ಲಿ ಹೂತು ಹೋಗಿವೆ.
ಇಬ್ಬರು ವಯಸ್ಕರು ಮತ್ತು ಐದು ಮಕ್ಕಳು ಸೇರಿದಂತೆ ಏಳು ಜನರ ಶವಗಳನ್ನು ಹೊರತೆಗೆಯಲಾಗಿದ್ದು, ಮೃತರನ್ನು ಎನ್. ರಾಜ್‌ಕುಮಾರ್(28), ಆರ್. ಮೀನಾ(27), ಅವರ ಮಕ್ಕಳಾದ ಆರ್. ಗೌತಮ್(9) ಮತ್ತು ಆರ್. ಇನಿಯಾ(5) ಮತ್ತು ಇನ್ನೂ ಮೂವರು ಮಕ್ಕಳಾದ ಎಸ್. ರಮ್ಯಾ( 7), ಎಂ.ವಿನೋತಿನಿ(14), ಮತ್ತು ಎಂ. ಮಹಾ(7) ಎಂದು ಗುರುತಿಸಲಾಗಿದ್ದು, ಎರಡು ಅಕ್ಕಪಕ್ಕದ ಕುಟುಂಬಗಳಾಗಿವೆ.
ಇಂದು ಬೆಳಗ್ಗೆ ರಾಜ್‌ಕುಮಾರ್ ಅವರ ಮೃತದೇಹ ಮತ್ತು ಮಧ್ಯಾಹ್ನ ರಮ್ಯಾ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.
"ನಾವು ಸೋಮವಾರ ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಮನೆಗಳಿಂದ ಐದು ಮೃತದೇಹಗಳನ್ನು ಹೊರತೆಗೆದಿದ್ದೇವೆ. ಆದರೆ, ರಾಜ್‌ಕುಮಾರ್ ಮತ್ತು ರಮ್ಯಾ ಶವಗಳನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿತ್ತು. ಏಕೆಂದರೆ ಅವರು ಭಾರೀ ಬಂಡೆಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು" ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹಗಳನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರನ್ನು ಏಳು ಜನರ ಕುಟುಂಬಗಳು ಗುರುತಿಸಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ನಮಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಆದರೆ, ನಮ್ಮಲ್ಲಿ ಏನೂ ಇಲ್ಲ. ನಾವು ಧರಿಸಿರುವ ಬಟ್ಟೆ ಮಾತ್ರ ಇದೆ. ಸರ್ಕಾರ ನಮಗೆ ಹೆಚ್ಚಿನ ಪರಿಹಾರ ನೀಡಿದರೆ ಒಳ್ಳೆಯದು ಎಂದು ಮೃತ ವಿನೋತಿನಿ ಮತ್ತು ಮಹಾ ಅವರ ತಂದೆ ಎಂ.ಎ.ಮಂಜುನಾಥನ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ನರಸಿಂಹ ರಾವ್, ಬೂಮಿನಾಥನ್ ಮತ್ತು ಮೋಹನ್ ಸೇರಿದಂತೆ ನಿವೃತ್ತ ಐಐಟಿ ಮದ್ರಾಸ್ ಪ್ರಾಧ್ಯಾಪಕರ ತಂಡವು ಹೆಚ್ಚಿನ ವಿಶ್ಲೇಷಣೆಗಾಗಿ ಮರಳು ಮಾದರಿಗಳನ್ನು ಸಂಗ್ರಹಿಸಲು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿಗೆ.
"ಈ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತದ ಸಾಧ್ಯತೆಯನ್ನು ನಿರ್ಣಯಿಸಲು ನಾವು ಅಣ್ಣಾಮಲೈಯಾರ್ ಬೆಟ್ಟಗಳಿಂದ ಮಾದರಿಗಳನ್ನು ತೆಗೆದುಕೊಂಡಿದ್ದೇವೆ" ಎಂದು ಅವರಲ್ಲಿ ಒಬ್ಬರು ತಿಳಿಸಿದ್ದಾರೆ.
Advertisement