ಮಹಾರಾಷ್ಟ್ರ ಸಿಎಂ ಆಯ್ಕೆ ವಿಚಾರದಲ್ಲಿ ಮುಂದುವರಿದ ಗೊಂದಲ, ಆದರೂ ಪಟ್ಟಾಭಿಷೇಕಕ್ಕೆ ಸಿದ್ಧತೆ: ಡಿ.5ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ

ನಾಳೆ ಡಿಸೆಂಬರ್ 4 ರಂದು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು ಮತ್ತು ಡಿಸೆಂಬರ್ 5 ರಂದು ಸಂಜೆ 5.00 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ.
Devendra Fadnavis and Eknath Shinde
ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ
Updated on

ಮುಂಬೈ: ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಯ್ಕೆ ಹಾಗೂ ಹಂಗಾಮಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಹೊಸ ಸರ್ಕಾರದ ಭಾಗವಾಗುವುದೇ ಎಂಬ ಅನಿಶ್ಚಿತತೆಯ ನಡುವೆ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ನಿನ್ನೆ ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರ ನೇತೃತ್ವದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಭೆ ಕರೆಯಲು ನೇಮಿಸಿದೆ.

ಮೂಲಗಳ ಪ್ರಕಾರ, ನಾಳೆ ಡಿಸೆಂಬರ್ 4 ರಂದು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು ಮತ್ತು ಡಿಸೆಂಬರ್ 5 ರಂದು ಸಂಜೆ 5.00 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ.

ಏಕನಾಥ್ ಶಿಂಧೆ, ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಅವರು ಮುಂಬೈನಲ್ಲಿ ಭೇಟಿಯಾಗಿ ನಂತರ ದೆಹಲಿಗೆ ತೆರಳಿ ಅಧಿಕಾರ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲು ಮತ್ತು ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಿಸಲು ಬಿಜೆಪಿಯ ಉನ್ನತ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಶಿವಸೇನಾ ಮೂಲಗಳು ತಿಳಿಸಿವೆ. ಆದರೆ, ಮುಂಬೈ ಅಥವಾ ದೆಹಲಿಯಲ್ಲಿ ಅಂತಹ ಯಾವುದೇ ಸಭೆ ನಡೆದಿಲ್ಲ.

ಸತಾರಾ ಜಿಲ್ಲೆಯ ತನ್ನ ಸ್ವಂತ ಗ್ರಾಮವಾದ ದರೇಗಾಂವ್‌ನಿಂದ ಹಿಂತಿರುಗಿದ ನಂತರ ಆರೋಗ್ಯದಿಂದ ಚೇತರಿಸಿಕೊಂಡಿರುವ ಏಕನಾಥ್ ಶಿಂಧೆ ಮತ್ತೆ ಗಂಟಲಿನ ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರು ನಿನ್ನೆ ಥಾಣೆ ನಿವಾಸದಲ್ಲಿ ತಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿರಲಿಲ್ಲ.

ಈ ಮಧ್ಯೆ, ಹೆಸರು ಹೇಳಲಿಚ್ಛಿಸದ ಶಿವಸೇನೆ ನಾಯಕರೊಬ್ಬರು ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿಯು ವಿಧಾನಸಭೆ ಚುನಾವಣೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಹುಮತದ 145 ರ ಸಮೀಪಕ್ಕೆ ತಲುಪಿದ್ದು, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಾಧ್ಯವಾಗದಿದ್ದರೂ ಕೂಡ ಅದು ಕನಿಷ್ಠ ಹಣಕಾಸು ಮತ್ತು ಗೃಹ ಖಾತೆಯಂತಹ ಪ್ರಮುಖ ಖಾತೆಗಳನ್ನು ಶಿವಸೇನೆಗೆ ಬಿಟ್ಟುಕೊಡಬೇಕು. ಕೇವಲ 41 ಶಾಸಕರಿದ್ದರೂ ಅಜಿತ್ ಪವಾರ್ ಅವರಿಗೆ ಹಣಕಾಸು ಖಾತೆಯ ಭರವಸೆ ನೀಡಲಾಗಿದೆ ಆದರೆ 57 ಶಾಸಕರಿದ್ದರೂ ಶಿವಸೇನೆಗೆ ಗೃಹ ಖಾತೆ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಇದು ಸಂಪೂರ್ಣವಾಗಿ ಅನ್ಯಾಯವಾಗಿದೆ. ಬಿಜೆಪಿಯು ನಗಣ್ಯ ಖಾತೆಗಳನ್ನು ನೀಡುವ ಮೂಲಕ ಅಥವಾ ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷಿಸುವ ಮೂಲಕ ಶಿವಸೇನೆಯನ್ನು ಅಧಿಕಾರದಿಂದ ದೂರ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

Devendra Fadnavis and Eknath Shinde
ಮಹಾರಾಷ್ಟ್ರ: ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವೀಕ್ಷಕರಾಗಿ ನಿರ್ಮಲಾ ಸೀತಾರಾಮನ್, ವಿಜಯ್ ರೂಪಾನಿ ನೇಮಕ

ಉದ್ಧವ್ ಠಾಕ್ರೆ ಅವರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಕಳೆದ ಬಾರಿ ಹೊಸ ಸರ್ಕಾರ ರಚಿಸಲು ಏಕನಾಥ್ ಶಿಂಧೆ ಅವರ ತ್ಯಾಗ ಮತ್ತು ಧೈರ್ಯವನ್ನು ಬಿಜೆಪಿ ಗೌರವಿಸಬೇಕು ಎಂದು ಶಿವಸೇನಾ ನಾಯಕ ಸಂಜಯ್ ಶಿರ್ಸಾತ್ ಹೇಳಿದ್ದಾರೆ. ಹೊಸ ಮಹಾಯುತಿ ಸರ್ಕಾರದಲ್ಲಿ ಗೌರವಾನ್ವಿತ ಒಪ್ಪಂದವನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಏಕನಾಥ್ ಶಿಂಧೆ ಅವರ ಪುತ್ರ ಡಾ ಶ್ರೀಕಾಂತ್ ಶಿಂಧೆ ಅವರು ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. ಅವರು ಉಪ ಮುಖ್ಯಮಂತ್ರಿಯಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವುದು ಆಧಾರರಹಿತವಾಗಿವೆ. ಲೋಕಸಭಾ ಚುನಾವಣೆಯ ನಂತರ ನನಗೆ ಸಚಿವನಾಗುವ ಅವಕಾಶ ಸಿಕ್ಕಿತು, ಆದರೆ ನಾನು ನಿರಾಕರಿಸಿದೆ. ಪಕ್ಷ ಸಂಘಟನೆಗಾಗಿ ಕೆಲಸ ಮಾಡಲು ನಿರ್ಧರಿಸಿದೆ. ನಾನು ಡಿಸಿಎಂ ಅಥವಾ ಸಚಿವ ಸ್ಥಾನದ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಶ್ರೀಕಾಂತ್ ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಡೆ ಪಾಟೀಲ್ ಅವರು ಫಡ್ನವೀಸ್ ಅವರನ್ನು ಸಿಎಂ ಮಾಡಲು ಬಯಸದ ಬಿಜೆಪಿಯ ಉನ್ನತ ನಾಯಕತ್ವವು ನಾಟಕವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಬೆಂಬಲವಿಲ್ಲದೆ ಏಕನಾಥ್ ಶಿಂಧೆ ಬಿಜೆಪಿ ಮತ್ತು ಅದರ ನಾಯಕತ್ವಕ್ಕೆ ಸವಾಲು ಹಾಕಲು ಧೈರ್ಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ,

ಬಿಜೆಪಿಯ ಆಂತರಿಕ ರಾಜಕೀಯ ಈಗ ಬಹಿರಂಗಗೊಂಡಿದೆ. ರಾಷ್ಟ್ರ ಮೊದಲು, ಪಕ್ಷ ಎರಡನೇ ಮತ್ತು ವೈಯಕ್ತಿಕ ಹಿತಾಸಕ್ತಿ ಮೂರನೆಯದಾಗಿ ಹೇಳುವ ಪಕ್ಷವು ಈಗ ವೈಯಕ್ತಿಕ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುತ್ತಿದೆ ಸ್ಪಷ್ಟ ಜನಾದೇಶದ ಹೊರತಾಗಿಯೂ ಅಸ್ತವ್ಯಸ್ತವಾಗಿರುವ ರಾಜಕೀಯ ಪರಿಸ್ಥಿತಿಗಳನ್ನು ಬಿಜೆಪಿ ಉಂಟುಮಾಡುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com