ಮುಂಬೈ: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಲ್ಲಿರುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಇಂದು ಬುಧವಾರ ಮಹಾರಾಷ್ಟ್ರ ವಿಧಾನ ಭವನದಲ್ಲಿ ಬಿಜೆಪಿಯ ನಿರ್ಣಾಯಕ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಹೊಸ ಬಿಜೆಪಿ-ಶಿವಸೇನೆ-ಎನ್‌ಸಿಪಿ ಮಹಾಯುತಿ ಸರ್ಕಾರದ ಸಿಎಂ ಹುದ್ದೆಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಸಭೆಯಲ್ಲಿ ಚುನಾಯಿತರಾದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಲು ಇಂದು ಸಾಯಂಕಾಲ ರಾಜ್ಯಪಾಲರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಿಸಲಾಗಿದೆ. ನಿನ್ನೆ ಸಂಜೆ ಮುಂಬೈಗೆ ಆಗಮಿಸಿದ ರೂಪಾನಿ ಅವರು, ಪಕ್ಷಕ್ಕೆ ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಮಾತುಕತೆ ನಡೆಸಿ ಶಾಸಕಾಂಗ ಪಕ್ಷದ ನಾಯಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ತಡರಾತ್ರಿ ತಿಳಿಸಿದ್ದಾರೆ. ಒಮ್ಮತ ಮೂಡಿದರೆ ಒಬ್ಬರ ಹೆಸರನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದರು.
ನಿನ್ನೆ ಸಂಜೆ ಫಡ್ನವೀಸ್ ಅವರು ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವರ ಅಧಿಕೃತ ನಿವಾಸ 'ವರ್ಷಾ'ದಲ್ಲಿ ಭೇಟಿಯಾದರು, ಸರ್ಕಾರ ರಚನೆಗಾಗಿ ಕಳೆದ ವಾರ ದೆಹಲಿಯಲ್ಲಿ ಚರ್ಚೆ ನಡೆಸಿದ ಬಳಿಕ ಮುಂಬೈನಲ್ಲಿ ನಡೆದ ಮೊದಲ ಮಾತುಕತೆ ಇದಾಗಿದೆ. ಒಂದು ಗಂಟೆ ಅವಧಿಯ ಸಭೆಯ ವಿವರಗಳು ಅಸ್ಪಷ್ಟವಾಗಿದ್ದರೂ, ಕೆಲವು ರಾಜಕೀಯ ವೀಕ್ಷಕರು ಬಿಜೆಪಿಯು ತನ್ನ ಆಯ್ಕೆಗಳನ್ನು ನೋಡುತ್ತಿದೆ ಎನ್ನಲಾಗುತ್ತಿದೆ.
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ನಾಳೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಮಾರು 2,000 ವಿವಿಐಪಿಗಳು ಮತ್ತು 40,000 ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ. ಹಲವು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ 19 ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೂರು ಮಿತ್ರಪಕ್ಷಗಳ ನಡುವೆ ಖಾತೆಗಳ ಹಂಚಿಕೆ ಸುಗಮ ಪ್ರಕ್ರಿಯೆಯಾಗದಿರಬಹುದು ಎಂದು ಹೇಳಲಾಗುತ್ತಿದೆ.
ನವೆಂಬರ್ 20 ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ 288 ಸ್ಥಾನಗಳಲ್ಲಿ 132 ಸ್ಥಾನಗಳನ್ನು ಗಳಿಸಿತು. ಅದರ ಮಿತ್ರಪಕ್ಷಗಳೊಂದಿಗೆ -- ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ, ಮಹಾಯುತಿ ಒಕ್ಕೂಟವು 230 ಸ್ಥಾನಗಳ ಬಹುಮತವನ್ನು ಹೊಂದಿದೆ.
Advertisement