ಅಮೃತಸರ: ಶಿರೋಮಣಿ ಅಕಾಲಿದಳ (SAD) ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನು ಇಂದು ಬುಧವಾರ ಅಮೃತಸರದ ಸ್ವರ್ಣ ಮಂದಿರದ ಹೊರಗೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈಯಲು ಯತ್ನಿಸಿದ ಘಟನೆ ನಡೆದಿದೆ.
ಸುಖ್ ಬೀರ್ ಸಿಂಗ್ ಬಾದಲ್ ಮತ್ತು ಇತರ ಎಸ್‌ಎಡಿ ನಾಯಕರು ಮೊನ್ನೆ ಸೋಮವಾರ ಅಕಾಲ್ ತಖ್ತ್ ಘೋಷಿಸಿದ 'ತಂಖಾ' (ಧಾರ್ಮಿಕ ಶಿಕ್ಷೆ) ಅಡಿಯಲ್ಲಿ 'ಸೇವಾದಾರ'ರಾಗಿ ಸೇವೆ ಸಲ್ಲಿಸುತ್ತಿರುವಾಗ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಗಾಲಿಕುರ್ಚಿಯಲ್ಲಿ ಕುಳಿತು 'ಸೇವೆ' ನಡೆಸುತ್ತಿದ್ದ ಬಾದಲ್ ಅವರು ಕುಳಿತಿದ್ದ ಹತ್ತಿರದ ಗೋಡೆಗೆ ಗುಂಡು ಅಪ್ಪಳಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾಳಿಕೋರನನ್ನು ನರೇನ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನನ್ನು ದೇವಸ್ಥಾನದ ಹೊರಗೆ ನೋಡುಗರು ಬೆನ್ನಟ್ಟಿ ಹೋಗಿ ಬಂಧಿಸಿದರು. ಘಟನೆಯ ಕುರಿತು ಪ್ರತಿಕ್ರಿಯಿಸಿದ ಎಸ್‌ಎಡಿ ನಾಯಕ ದಲ್ಜಿತ್ ಸಿಂಗ್ ಚೀಮಾ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಇದು ರಾಜ್ಯವನ್ನು ಮತ್ತೆ ಪ್ರಕ್ಷುಬ್ಧತೆಗೆ ತಳ್ಳುವ ಪಿತೂರಿ ಎಂದು ಟೀಕಿಸಿದರು.
ಇದು ಪಂಜಾಬ್ ನ್ನು ಮತ್ತೆ ದಾಳಿಯ ಸನ್ನಿವೇಶಕ್ಕೆ ತಳ್ಳುವ ದೊಡ್ಡ ಷಡ್ಯಂತ್ರವಾಗಿದೆ. ದೇವಾಲಯದ ಪ್ರವೇಶದ್ವಾರದಲ್ಲಿ 'ಸೇವದಾರ್' ಆಗಿ ಸೇವೆ ಸಲ್ಲಿಸುತ್ತಿದ್ದ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲು ಯತ್ನಿಸಲಾಗಿದೆ. ಅದೃಷ್ಟವಶಾತ್ ಪಾರಾಗಿದ್ದಾರೆ. ಸಿಎಂ ಭಗವಂತ್ ಮಾನ್ ಅವರು ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ನಾವು ನಮ್ಮ 'ಸೇವೆ'ಯನ್ನು ಮುಂದುವರಿಸುತ್ತೇವೆ ಎಂದರು.
ಅಕಾಲ್ ತಕ್ತ್ ಸೋಮವಾರ ಎಸ್‌ಎಡಿ ಸದಸ್ಯರಾದ ಸುಖ್‌ಬೀರ್, ಹಿರಿಯ ನಾಯಕ ಸುಖ್‌ದೇವ್ ಸಿಂಗ್ ಧಿಂಡ್ಸಾ, ಪಂಜಾಬ್ ಮಾಜಿ ಸಚಿವ ಮತ್ತು ಸುಖ್‌ಬೀರ್ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಸೋದರ ಮಾವ ಅವರಿಗೆ 'ತಂಖಾ' ಪ್ರದಾನ ಮಾಡಿತ್ತು. 2007 ರಿಂದ 2017 ರವರೆಗೆ ಪಂಜಾಬ್‌ನಲ್ಲಿ ಎಸ್‌ಎಡಿ ಸರ್ಕಾರ ಮಾಡಿದ ತಪ್ಪುಗಳಿಗಾಗಿ ಅಕಾಲ್ ತಖ್ತ್‌ನಿಂದ ನಾಯಕರನ್ನು 'ತಂಖೈಯಾ' (ಧಾರ್ಮಿಕ ದುಷ್ಕೃತ್ಯದ ತಪ್ಪಿತಸ್ಥರು) ಎಂದು ಘೋಷಿಸಲಾಯಿತು.
ಅವರಾಧಿಗಳು ಎಂದು ಘೋಷಿಸಿ ಮೂರು ತಿಂಗಳ ನಂತರ ಸಿಖ್ ಧರ್ಮಗುರುಗಳು ಬಾದಲ್ ಮತ್ತು ಇತರರನ್ನು 'ಸೇವದಾರ್' ಆಗಿ ಸೇವೆ ಸಲ್ಲಿಸುವಂತೆ ನಿರ್ದೇಶಿಸಿದರು, ಅಮೃತಸರದ ಸ್ವರ್ಣಮಂದಿರದಲ್ಲಿ ಪಾತ್ರೆಗಳನ್ನು ತೊಳೆಯಲು, ಶೂಗಳು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಸೂಚಿಸಿದ್ದರು.
ಬಾದಲ್ ತನ್ನ ಸ್ಥಾನವನ್ನು 'ಸೇವಾದಾರ' ಎಂದು ಸೂಚಿಸಲು ನೀಲಿ ಬಟ್ಟೆಗಳನ್ನು ಧರಿಸಿದ್ದರು. ಇತ್ತೀಚೆಗಷ್ಟೇ ಅವರ ಕಾಲು ಮುರಿದಿದ್ದರಿಂದ ಒಂದು ಕೈಯಲ್ಲಿ ಈಟಿ ಹಿಡಿದು ಗಾಲಿಕುರ್ಚಿಯ ಮೇಲೆ ಕುಳಿತಿದ್ದರು. ಸುಖದೇವ್ ಸಿಂಗ್ ಅವರನ್ನು ಗೋಲ್ಡನ್ ಟೆಂಪಲ್‌ನ ಪ್ರವೇಶ ದ್ವಾರದ ಬಳಿ ಕೂರಿಸಿ ಒಂದು ಗಂಟೆ ಕಾಲ 'ಸೇವದಾರ್' ಆಗಿ ಸೇವೆ ಸಲ್ಲಿಸುವುದು ಅವರ ಇತ್ತೀಚಿನ ದಿನಚರಿಯಾಗಿತ್ತು.
Advertisement