
ನವದೆಹಲಿ: 2017ರಲ್ಲಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬಿಜೆಪಿಯ ಉಚ್ಛಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವೈದ್ಯಕೀಯ ಕಾರಣಗಳಿಗಾಗಿ ದೆಹಲಿ ಹೈಕೋರ್ಟ್ ಗುರುವಾರ ಎರಡು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಅಮಿತ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠ, ಶಿಕ್ಷೆಯನ್ನು ಸದ್ಯಕ್ಕೆ ಅಮಾನತುಗೊಳಿಸಿತು. ಅನಾರೋಗ್ಯದ ಕಾರಣ ಸೆಂಗಾರ್ ಅವರನ್ನು ಏಮ್ಸ್-ದೆಹಲಿಗೆ ದಾಖಲಿಸಬೇಕು ಮತ್ತು ಬಿಡುಗಡೆಯಾದ ನಂತರ ರಾಜಧಾನಿಯಲ್ಲೇ ಇರಬೇಕು ಎಂದು ನಿರ್ದೇಶಿಸಿತು.
ಪ್ರಕರಣದ ಇತಿಹಾಸ ಮತ್ತು ಅರ್ಜಿದಾರರ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ, ಅವರನ್ನು ಎರಡು ವಾರಗಳವರೆಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಮತ್ತು ಸಮಗ್ರ ವೈದ್ಯಕೀಯ ಪರಿಶೀಲನೆಗಾಗಿ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಬೇಕು ಎಂದು ನ್ಯಾಯಪೀಠ ಹೇಳಿತು.
ಏಮ್ಸ್‌ನ ವೈದ್ಯಕೀಯ ಮಂಡಳಿಯಿಂದ ವರದಿ ಕೇಳಿರುವ ನ್ಯಾಯಾಲಯ, ಡಿಸೆಂಬರ್ 20 ರಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣದಲ್ಲೂ ಸೆಂಗಾರ್ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿ ಇನ್ನೂ ಹೈಕೋರ್ಟ್‌ನ ಇನ್ನೊಂದು ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ.
Advertisement