
ಮುಂಬೈ: ಬಾಬರಿ ಮಸೀದಿ ಧ್ವಂಸ ಮತ್ತು ಪತ್ರಿಕೆಯಲ್ಲಿ ಪ್ರಕಟವಾದ ಅದರ ಜಾಹೀರಾತನ್ನು ಶ್ಲಾಘಿಸಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಪೋಸ್ಟ್ ಮಾಡಿದ್ದು ಇದರ ಬೆನ್ನಲ್ಲೆ ಸಮಾಜವಾದಿ ಪಕ್ಷವು MVAಯಿಂದ ಹೊರಬರಲು ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷದ ಇಬ್ಬರು ಶಾಸಕರಿದ್ದಾರೆ.
ಎಸ್‌ಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಜ್ಮಿ, 'ಶಿವಸೇನೆ (ಯುಬಿಟಿ) ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದು, ಅದರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಅಭಿನಂದಿಸಲಾಗಿದೆ. ಅಲ್ಲದೆ ಉದ್ಧವ್ ಠಾಕ್ರೆ ಸಹೋದ್ಯೋಗಿ ಕೂಡ ಮಸೀದಿ ಧ್ವಂಸವನ್ನು ಶ್ಲಾಘಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಹೀಗಾಗಿ ನಾವು ಎಂವಿಎ ತೊರೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ.
ಬಾಬರಿ ಮಸೀದಿ ಧ್ವಂಸ ಕುರಿತು ಸೇನಾ (ಯುಬಿಟಿ) ಎಂಎಲ್‌ಸಿ ಮಿಲಿಂದ್ ನಾರ್ವೇಕರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಬು ಅಜ್ಮಿ, 'ಎಂವಿಎಯಲ್ಲಿ ಯಾರಾದರೂ ಆ ರೀತಿ ಮಾತನಾಡಿದರೆ, ಅವರಿಗೂ ಬಿಜೆಪಿಗೂ ಏನು ವ್ಯತ್ಯಾಸ? ಅವರ ಜೊತೆ ನಾವೇಕೆ ಉಳಿಯಬೇಕು? ಎಂದು ಹೇಳಿದ್ದಾರೆ. ನಾರ್ವೇಕರ್ ಮಾಡಿದ್ದ ಪೋಸ್ಟ್ ನಲ್ಲಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ಇತರರ ಚಿತ್ರಗಳೂ ಇವೆ.
ಇತ್ತೀಚಿನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಏಕಪಕ್ಷೀಯ ಸ್ಪರ್ಧೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದೆ. ಮಹಾಯುತಿ 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿದೆ. ಏತನ್ಮಧ್ಯೆ, ಎಂವಿಎ ಕೇವಲ 46 ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಇದರಲ್ಲಿ ಉದ್ಧವ್ ಸೇನೆ 20, ಶರದ್ ಗುಂಪಿನ ಎನ್‌ಸಿಪಿ 10 ಮತ್ತು ಕಾಂಗ್ರೆಸ್ ಒಟ್ಟು 16 ಸ್ಥಾನಗಳಲ್ಲಿ ಗೆದ್ದಿದೆ.
Advertisement