
ಮುಂಬೈ: ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರು ಮಂಗಳವಾರ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು.
ಇಂದು ದಕ್ಷಿಣ ಮುಂಬೈನಲ್ಲಿರುವ ಫಡ್ನವಿಸ್ ಅವರ 'ಸಾಗರ್' ಬಂಗಲೆಯಲ್ಲಿ ಅದಾನಿ ಭೇಟಿ ಮಾಡಿದರು.
"ಇದು ಅದಾನಿಯವರ ಸೌಜನ್ಯದ ಭೇಟಿಯಾಗಿದೆ. ಅವರು ಫಡ್ನವಿಸ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಅವರನ್ನು ಭೇಟಿಯಾದರು" ಎಂದು ಮೂಲವೊಂದು ತಿಳಿಸಿದೆ.
54 ವರ್ಷದ ಫಡ್ನವಿಸ್ ಅವರು ಡಿಸೆಂಬರ್ 5 ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಮೂರನೇ ಬಾರಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಲವಾರು ಕೇಂದ್ರ ಸಚಿವರು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಉದ್ಯಮಿಗಳು, ಬಾಲಿವುಡ್ ನಟ, ನಟಿಯರು ಭಾಗವಹಿಸಿದ್ದರು.
ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್ ಕಪೂರ್ ಮತ್ತು ಮಾಧುರಿ ದೀಕ್ಷಿತ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
Advertisement