
ನವದೆಹಲಿ: ಸಂಸತ್ ಕಲಾಪ ಬಿಕ್ಕಟ್ಟಿನ ನಡುವೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಬುಧವಾರ ಭೇಟಿ ಮಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ದಾಖಲೆಯಿಂದ ತೆಗೆದು ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನನ್ನ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದೆ. ಆದರೆ, ಇಂತಹ ಯಾವುದೇ ಆರೋಪಗಳಿಂದ ನಾನು ವಿಚಲಿತನಾಗುವುದಿಲ್ಲ ಎಂದಿದ್ದಾರೆ. ಡಿಸೆಂಬರ್ 13 ರಿಂದ ಲೋಕಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆಗೆ ತಮ್ಮ ಪಕ್ಷ ಬಯಸಿದ್ದು, ಸುಗಮ ಕಲಾಪಕ್ಕೆ ನಾವು ಯತ್ನಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಸಂಸತ್ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸ್ಪೀಕರ್ ಜೊತೆಗೆ ಮಾತನಾಡಿದ್ದೇನೆ. ತನ್ನ ವಿರುದ್ಧ ಮಾಡಲಾಗಿರುವ ಅವಹೇಳನಕಾರಿ ಹೇಳಿಕೆಗಳನ್ನು ತೆಗೆದುಹಾಕಬೇಕು ಎಂದು ನಮ್ಮ ಪಕ್ಷದವರು ಹೇಳಿದ್ದಾರೆ. ಅವುಗಳನ್ನು ಪರಿಶೀಲಿಸುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಎಲ್ಲಾ ರೀತಿಯ ನಿರಾಧಾರ ಆರೋಪಗಳನ್ನು ಮುಂದುವರೆಸಿದೆ. ಆದರೆ, ನಾವು ಸುಗಮ ಕಲಾಪಕ್ಕೆ ಸಹಕರಿಸಲು ನಿರ್ಧರಿಸಿದ್ದೇವೆ. ಬಿಜೆಪಿಯವರು ಏನೇ ಪ್ರಚೋದಿಸಲಿ, ಅವರಿಗೆ ಅವಕಾಶ ಮಾಡಿಕೊಡುತ್ತೇವೆ. ಆದರೆ, ನಾವು ಸುಗಮ ಕಲಾಪ ನಡೆಯಲು ಅವಕಾಶ ಮಾಡಿಕೊಡುವುದಕ್ಕೆ ಯತ್ನಿಸುತ್ತೇವೆ. ಡಿಸೆಂಬರ್ 13 ರಂದು ಸಂವಿಧಾನ ಕುರಿತ ಚರ್ಚೆಗೆ ಬಯಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ಸಂಸದರು ನನ್ನ ಬಗ್ಗೆ ಏನೇ ಮಾತನಾಡಲಿ, ಆದರೆ ಸಂವಿಧಾನ ಕುರಿತು ಚರ್ಚೆ ನಡೆಯಬೇಕು. ಇದು ತುಂಬಾ ಸರಳವಾಗಿದೆ. ಅದಾನಿ ವಿಚಾರದ ಬಗ್ಗೆ ಚರ್ಚೆಗೆ ಅವರು ಸಿದ್ಧರಿಲ್ಲ. ಅದಾನಿ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅಧಿವೇಶನದ ಕೊನೆಯವರೆಗೂ ನಾವು ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದರು.
Advertisement