
ಆಲಿಗಢ: ಬಲಪಂಥೀಯ ಸಂಘಟನೆಗಳ ಪ್ರತಿಭಟನೆ ಬೆದರಿಕೆಯ ನಂತರ ಅಮೆರಿಕ ಮೂಲದ ಅನ್ಯ ಧರ್ಮೀಯ ದಂಪತಿ ತಮ್ಮ ವಿವಾಹದ ಆರತಕ್ಷತೆಯನ್ನು ರದ್ದುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಆಲಿಗಢ ಜಿಲ್ಲೆಯಲ್ಲಿ ನಡೆದಿದೆ.
ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ರಿಜಿಸ್ಟರ್ ಮದುವೆಯಾಗಿದ್ದ ದಂಪತಿ, ಶನಿವಾರ ಆಲಿಗಢ ಹೋಟೆಲ್ ವೊಂದರಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಆರತಕ್ಷತೆ ಆಯೋಜಿಸಲು ಯೋಜಿಸಿದ್ದರು. ಆದರೆ, ಆರತಕ್ಷತೆಯ ಆಮಂತ್ರಣ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಬಜರಂಗ ದಳ, ಅಖಿಲ ಭಾರತ ಕರ್ಣಿ ಸೇನೆ ಮತ್ತು ಕೆಲವು ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಆರತಕ್ಷತೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಡಿಸೆಂಬರ್ 12 ರಂದು ಘೋಷಿಸಿದ್ದ ಬಲಪಂಥೀಯ ಸಂಘಟನೆಗಳು,ಬುಕಿಂಗ್ ರದ್ದುಗೊಳಿಸುವಂತೆ ಹೋಟೆಲ್ ಆಡಳಿತದ ಮೇಲೆ ಒತ್ತಡ ಹೇರಿದ್ದವು. ಅಲ್ಲದೇ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಅವರನ್ನು ಸಂಪರ್ಕಿಸಿ, ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿತ್ತು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಸಂಭಾಲ್ , ಬರೈಚ್ ನಲ್ಲಿನ ಇತ್ತೀಚಿನ ಹಿಂಸಾಚಾರವನ್ನು ಉಲ್ಲೇಖಿಸಿ, ಆರತಕ್ಷತೆಯೂ ನಗರದಲ್ಲಿ ಶಾಂತಿಯನ್ನು ಹದಗೆಡಬಹುದು ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು.
ಇದು ಲವ್ ಜಿಹಾದ್ ವಿವಾಹವಾಗಿದ್ದು,ಆರತಕ್ಷತೆಗೆ ನಮ್ಮ ಸಂಪೂರ್ಣ ವಿರೋಧವಿದೆ. ಈ ವಿಚಾರದಲ್ಲಿ ಜಿಲ್ಲಾಡಳಿತದ ನಿರ್ದೇಶನಗಳನ್ನು ಅನುಸರಿಸುವುದಾಗಿ ಹೋಟೆಲ್ ಮ್ಯಾನೇಜ್ ಮೆಂಟ್ ಹೇಳಿದೆ ಎಂದು ಅಖಿಲ ಭಾರತ ಕರ್ಣಿ ಸೇನಾ ಅಧ್ಯಕ್ಷ ಠಾಕೂರ್ ಜ್ಞಾನೇಂದ್ರ ಸಿಂಗ್ ಚೌಹಾಣ್ ಹೇಳಿದ್ದರು.
ಈ ಮಧ್ಯೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಡಿಸೆಂಬರ್ 13 ರಂದು ಚರ್ಚೆ ನಡೆಸಿದ್ದರು. ಆದರೆ ಅಹಿತಕರ ಘಟನೆ ಉಲ್ಲೇಖಿಸಿ ಎರಡೂ ಕುಟುಂಬದವರೂ ಆರತಕ್ಷತೆ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ದಂಪತಿ ಶಿಕ್ಷಿತರಾಗಿದ್ದು, ದೊಡ್ಡ ಕುಟುಂಬದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಎರಡು ಕಡೆಯ ಒಪ್ಪಿಗೆಯ ನಂತರ ವಿವಾಹವಾಗಿರುವುದಾಗಿ ಕುಟುಂಬದ ಮೂಲಗಳು ಹೇಳಿವೆ.
Advertisement