
ಮುಂಬೈ: ಮಹಾರಾಷ್ಟ್ರದಲ್ಲಿ ಸಂಪುಟ ರಚನೆ, ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಮಹಾಯುತಿಯಲ್ಲಿ ಅಸಮಾಧಾನ ತಲೆದೋರಿರುವ ನಡುವೆ ಫಡ್ನವಿಸ್, ಶಿಂಧೆಗೆ ಸಂಬಂಧಿಸಿದ ವಿಷಯವೊಂದರಲ್ಲಿ ಎಸ್ ಐಟಿ ತನಿಖೆ ನಡೆಸಬೇಕೆಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಪ್ರವೀಣ್ ದಾರೆಕರ್ ಒತ್ತಾಯಿಸಿದ್ದಾರೆ.
ಮಹಾವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ ದೇವೇಂದ್ರ ಫಡ್ನವಿಸ್ ಹಾಗೂ ಮಾಜಿ ಸಿಎಂ, ಹಾಲಿ ಡಿಸಿಎಂ ಆಗಿರುವ ಏಕನಾಥ್ ಶಿಂಧೆ ಅವರನ್ನು ಸುಳ್ಳು ಪ್ರಕರಣವೊಂದರಲ್ಲಿ ಸಿಲುಕಿಸಲು ಪಿತೂರಿ ನಡೆಸಲಾಗಿತ್ತು ಎಂದು ಪ್ರವೀಣ್ ದಾರೆಕರ್ ಆರೋಪಿಸಿದ್ದಾರೆ.
ಆ ಸಮಯದಲ್ಲಿ, ಬಿಜೆಪಿ ಶಾಸಕ ಫಡ್ನವೀಸ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು, ಆದರೆ ಶಿಂಧೆ ಅವರು ನಗರಾಭಿವೃದ್ಧಿ ಸಚಿವಾಲಯವನ್ನು ಹೊಂದಿರುವ ಉದ್ಧವ್ ಠಾಕ್ರೆ ಸಂಪುಟದ ಸದಸ್ಯರಾಗಿದ್ದರು.
MVA ಸರ್ಕಾರದ ಪತನದ ನಂತರ, ಶಿಂಧೆ ಜೂನ್ 2022 ರಲ್ಲಿ ಸಿಎಂ ಆಗಿ, ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ನಾಗ್ಪುರದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮೇಲ್ಮನೆಯಲ್ಲಿ ಮಾಹಿತಿಯ ವಿಷಯದ ಕುರಿತು ಮಾತನಾಡುತ್ತಾ ದಾರೇಕರ್ ಅವರು ಈ ಆರೋಪ ಮಾಡಿದ್ದು ಸಂಚಿನ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಮಹಾಯುತಿ ಸರ್ಕಾರದ ಪರವಾಗಿ ಮಾತನಾಡಿದ ಸಂಪುಟ ಸಚಿವ ಶಂಭುರಾಜ್ ದೇಸಾಯಿ, ದಾರೆಕರ್ ಎತ್ತಿರುವ ಸಮಸ್ಯೆ ಗಂಭೀರವಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಪಿತೂರಿಗೆ ಸಂಬಂಧಿಸಿದ ಆಡಿಯೋ ಕ್ಲಿಪ್‌ಗಳನ್ನು ಡಿ.16 ರಂದು ಟಿವಿ ಚಾನೆಲ್‌ಗಳಲ್ಲಿ ಪ್ಲೇ ಮಾಡಲಾಗಿದೆ ಎಂದು ದಾರೆಕರ್ ಹೇಳಿದರು.
ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ ಮತ್ತು ಆಗಿನ ಎಸಿಪಿ ಲಕ್ಷ್ಮೀಕಾಂತ್ ಪಾಟೀಲ್ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ ಹೊಂದಿರುವ ಪೆನ್ ಡ್ರೈವ್ ತನ್ನ ಬಳಿ ಇದೆ ಎಂದು ಆಡಳಿತ ಪಕ್ಷದ ಎಂಎಲ್ ಸಿ ಹೇಳಿಕೊಂಡಿದ್ದಾರೆ.
Advertisement