
ಪುಣೆ: ಸಂವಿಧಾನದ ಪಿತಾಮಹ ಡಾ. ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ನಿನ್ನೆ ಆಡಿರುವ ಮಾತುಗಳು ಬಿಜೆಪಿಯ ಹಳೆಯ ಮನಸ್ಥಿತಿಯ ಪ್ರದರ್ಶನವಾಗಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬುಧವಾರ ಕಿಡಿಕಾರಿದ್ದಾರೆ.
ಅಂಬೇಡ್ಕರ್ ಕುರಿತ ಹೇಳಿಕೆ ಹಿನ್ನೆಲೆಯಲ್ಲಿ ಸಂಸತ್ ಹಾಗೂ ಸಾರ್ವಜನಿಕವಾಗಿ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಸಂಸದರು ಪ್ರತಿಭಟನೆ ನಡೆಸುತ್ತಿರುವಂತೆಯೇ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು ಅದರ ಮಾರ್ಗದರ್ಶಕರಾದ ಜನ ಸಂಘ ಹಾಗೂ ಆರ್ ಎಸ್ ಎಸ್ ಸಂವಿಧಾನವನ್ನು ಅಂಗೀಕರಿಸುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿರೋಧಿಸಿದ್ದರು ಎಂದು ತಿಳಿಸಿದರು.
ಅಮಿತ್ ಶಾ ಅವರ ಹೇಳಿಕೆ ಬಿಜೆಪಿಯ ಹಳೆಯ ಮನಸ್ಥಿತಿಯನ್ನು ತೋರಿಸಿದೆ. ಅದರಲ್ಲಿ ಯಾವುದೇ ಹೊಸದು ಇಲ್ಲ. ಅಂಬೇಡ್ಕರ್ ಕಾರಣದಿಂದ ಅವರು ತಮ್ಮ ಹಳೆಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರನ್ನು ದೂಷಿಸುತ್ತಲೇ ಇದ್ದಾರೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಈ ಮಧ್ಯೆ ರಾಜ್ಯಸಭೆಯಲ್ಲಿ ಅಮಿತ್ ಶಾ ನೀಡಿರುವ ವಿಡಿಯೋ ತುಣುಕನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಳ್ಳುವ ಮೂಲಕ ಕೇಂದ್ರ ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ರಾಜ್ಯಸಭೆಯಲ್ಲಿ ಸಂವಿಧಾನ ಅಂಗೀಕಾರವಾಗಿ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ್ದ ಅಮಿತ್ ಶಾ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಈಗ ಪ್ಯಾಶನ್ ಆಗಿಬಿಟ್ಟಿದೆ. ಅದರ ಬದಲು ದೇವರ ಹೆಸರನ್ನು ಹಲವು ಸಲ ಹೇಳಿದ್ದರೆ ಸ್ವರ್ಗದಲ್ಲಿ ಸ್ಥಾನ ಪಡೆಯಬಹುದಿತ್ತು ಎಂದು ಹೇಳಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.
Advertisement