
ಇಂದೋರ್: ಭಾರತದ ಸ್ವಚ್ಛ ನಗರ ಎಂದೇ ಖ್ಯಾತಿ ಗಳಿಸಿರುವ ಮಧ್ಯ ಪ್ರದೇಶದ ಇಂದೋರ್, ಈಗ ಭಿಕ್ಷಾಟನೆ ಮುಕ್ತವಾಗಲು ಪಣ ತೊಟ್ಟಿದೆ. ನಗರದ ಬೀದಿಗಳು ಭಿಕ್ಷುಕರಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತೀವ್ರ ಕ್ರಮಕ್ಕೆ ಮುಂದಾಗಿರುವ ಇಂದೋರ್ ಜಿಲ್ಲಾಡಳಿತ, ಜನವರಿ 1, 2025 ರಿಂದ ನಗರದಲ್ಲಿ ಭಿಕ್ಷುಕರಿಗೆ ಭಿಕ್ಷೆ ನೀಡುವವರ ವಿರುದ್ಧವೇ ಎಫ್‌ಐಆರ್ ದಾಖಲಿಸಲು ನಿರ್ಧರಿಸಿದೆ.
ಭಿಕ್ಷಾಟನೆ ವಿರುದ್ಧ ಜಾಗೃತಿ ಅಭಿಯಾನವು ಡಿಸೆಂಬರ್ 2024 ರ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್, ನಿವಾಸಿಗಳು ಭಿಕ್ಷೆ ನೀಡುವುದನ್ನು ತಡೆಯಲು ಒತ್ತಾಯಿಸಿದರು. "ಇಂಧೋರ್‌ನ ಎಲ್ಲಾ ನಿವಾಸಿಗಳಿಗೆ ಮನವಿ ಮಾಡುತ್ತೇನೆ. ಭಿಕ್ಷೆ ನೀಡುವ ಮೂಲಕ ಪಾಪದಲ್ಲಿ ಪಾಲುದಾರರಾಗಬೇಡಿ. ಜನವರಿ 1 ರಿಂದ ಯಾರಾದರೂ ಭಿಕ್ಷೆ ನೀಡುತ್ತಿರುವುದು ಕಂಡುಬಂದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಕ್ರಮವು ಇಂದೋರ್ ಸೇರಿದಂತೆ 10 ನಗರಗಳನ್ನು ಭಿಕ್ಷಾಟನೆಯಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಸ್ಮೈಲ್ (ಲೈವ್ಲಿಹುಡ್ ಮತ್ತು ಎಂಟರ್‌ಪ್ರೈಸ್‌ಗಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ) ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಪ್ರಾಯೋಗಿಕ ಯೋಜನೆಯ ಭಾಗವಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿಶಾಲ ಉಪಕ್ರಮದ ಭಾಗವಾಗಿ ಇಂದೋರ್ ಅನ್ನು ಭಿಕ್ಷುಕ ಮುಕ್ತಗೊಳಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ.
ರಾಜ್ಯ ಸರ್ಕಾರಗಳು, ಸ್ಥಳೀಯ ಅಧಿಕಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾದ ಈ ಯೋಜನೆಯು ಜಾಗೃತಿ ಮೂಡಿಸುವಿಕೆ, ಗುರುತಿಸುವಿಕೆ, ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಸಮಾಲೋಚನೆ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರ ಪರಿಹಾರದಂತಹ ಹಲವಾರು ಸೇವೆಗಳನ್ನು ಒದಗಿಸುತ್ತದೆ.
ಜನವರಿ 1, 2025ರಿಂದ ಅನ್ವಯವಾಗುವಂತೆ, ಇಂದೋರ್ ಜಿಲ್ಲಾ ವ್ಯಾಪ್ತಿಯಲ್ಲಿನ ಭಿಕ್ಷುಕರಿಗೆ ಭಿಕ್ಷೆ ನೀಡುವುದು ಅಥವಾ ಇನ್ಯಾವುದಾದರೂ ರೀತಿಯಲ್ಲಿ ಸಹಾಯಹಸ್ತ ಚಾಚುವುದನ್ನು ನಿಷೇಧಿಸಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿರುವ ಭಿಕ್ಷುಕರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement