ಮುಂಬೈ: ನೌಕಾಪಡೆ ಸ್ಪೀಡ್ ಬೋಟ್ ಡಿಕ್ಕಿ ದುರಂತದಲ್ಲಿ ನಾಪತ್ತೆಯಾಗಿದ್ದ ಪ್ರಯಾಣಿಕನ ಶವ ಪತ್ತೆ!
ಮುಂಬೈ: ಮುಂಬೈ ಕರಾವಳಿಯಲ್ಲಿ ಪ್ರವಾಸಿ ದೋಣಿಗೆ ನೌಕಾಪಡೆ ಸ್ಪೀಡ್ ಬೋಟ್ ಡಿಕ್ಕಿ ಹೊಡೆದು ನಾಪತ್ತೆಯಾಗಿದ್ದ ಇಬ್ಬರು ಪ್ರಯಾಣಿಕರ ಪೈಕಿ 43 ವರ್ಷದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಪೊಲೀಸರು ಈ ಮಾಹಿತಿ ನೀಡಿದ್ದಾರೆ.
ಬೋಟ್ ಬಳಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಸಾವಿನ ಸಂಖ್ಯೆ ಈಗ 14ಕ್ಕೆ ತಲುಪಿದೆ. ಅಪಘಾತದ ಒಂದು ದಿನದ ನಂತರವೂ ಕಾಣೆಯಾಗಿರುವ ಏಳು ವರ್ಷದ ಮಗುವಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ ಪ್ರಯಾಣಿಕರನ್ನು ಹುಡುಕಲು ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ಹೆಲಿಕಾಪ್ಟರ್ ಮತ್ತು ಬೋಟ್‌ಗಳನ್ನು ಗುರುವಾರ ನಿಯೋಜಿಸಲಾಗಿದೆ. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸೇರಿದಂತೆ ಎಂಟು ದೋಣಿಗಳು ಶೋಧ ಮತ್ತು ರಕ್ಷಣಾ (ಎಸ್‌ಎಆರ್) ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹಡಗು ಮತ್ತು ದೋಣಿಯಲ್ಲಿದ್ದ 113 ಜನರಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡವರು ಸೇರಿದಂತೆ 98 ಜನರನ್ನು ರಕ್ಷಿಸಲಾಗಿದೆ. ನೌಕಾಪಡೆಯ ಹಡಗಿನಲ್ಲಿ ಆರು ಜನರಿದ್ದು ಅದರಲ್ಲಿ ಇಬ್ಬರು ಬದುಕುಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮುಂಬೈ ಕರಾವಳಿಯ ಕಾರಂಜಾ ಬಳಿ ಇಂಜಿನ್ ಪರೀಕ್ಷೆ ವೇಳೆ ನೌಕಾಪಡೆಯ ಸ್ಪೀಡ್ ಬೋಟ್ ನಿಯಂತ್ರಣ ತಪ್ಪಿ 'ನೀಲಕಮಲ್' ಹೆಸರಿನ ದೋಣಿಗೆ ಡಿಕ್ಕಿ ಹೊಡೆದಿತ್ತು ಎಂದು ನೌಕಾಪಡೆ ತಿಳಿಸಿದೆ. ಈ ದೋಣಿಯು ಗೇಟ್‌ವೇ ಆಫ್ ಇಂಡಿಯಾದಿಂದ ಜನಪ್ರಿಯ ಪ್ರವಾಸಿ ತಾಣವಾದ 'ಎಲಿಫೆಂಟಾ' ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ