
ನವದೆಹಲಿ: ಸಂಸತ್ ಆವರಣದಲ್ಲಿ ಗುರುವಾರ ಆಡಳಿತಾರೂಢ ಎನ್ ಡಿಎ ಹಾಗೂ ವಿಪಕ್ಷಗಳ ಪ್ರತಿಭಟನೆ ವೇಳೆಯಲ್ಲಿನ ನಡೆದ ತಳ್ಳಾಟ- ನೂಕಾಟ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಮತ್ತು ಅಮೆರಿಕದ ನ್ಯಾಯಾಲಯದಲ್ಲಿ ಅದಾನಿ ವಿರುದ್ಧ ಚಾರ್ಜ್ ಶೀಟ್ ವಿವಾದದಿಂದ ಗಮನ ಬೇರೆಡೆ ಸೆಳೆಯುವ ಬಿಜೆಪಿಯ ತಂತ್ರವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಎಲ್ಲಾ ಸಂಸದರು ಶಾಂತಯುತವಾಗಿ ಸಂಸತ್ ಭವನಕ್ಕೆ ಹೋಗುತ್ತಿದ್ದರು. ಸಂಸತ್ ಭವನದ ಮೆಟ್ಟಿಲುಗಳ ಮೇಲೆ ನಿಂತಿದ್ದ ಬಿಜೆಪಿ ಸಂಸದರು ನಮ್ಮನ್ನು ತಡೆದರು. ನರೇಂದ್ರ ಮೋದಿ ಅವರ ಸ್ನೇಹಿತ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದ ಕೇಸ್ ನಡೆಯುತ್ತಿದೆ. ಮೋದಿ ಭಾರತವನ್ನು ಅದಾನಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ. ಸಂಸತ್ತಿನಲ್ಲಿ ಈ ಕುರಿತ ಚರ್ಚೆಗೆ ಬಿಜೆಪಿ ಸಿದ್ಧವಿಲ್ಲ ಎಂದು ಆರೋಪಿಸಿದರು.
ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದಲೂ ಪ್ರಮುಖ ವಿಚಾರಗಳ ಚರ್ಚೆಗಳಿಂದ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಬಿಜೆಪಿ ಸಂವಿಧಾನ, ಅಂಬೇಡ್ಕರ್ ವಿರೋಧಿಯಾಗಿದೆ. ಕೇಂದ್ರ ಗೃಹ ಸಚಿವರ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ವಿಪಕ್ಷ ಸಂಸದರು ಅಂಬೇಡ್ಕರ್ ಪ್ರತಿಮೆಯಿಂದ ಸಂಸತ್ ಭವನದತ್ತ ತೆರಳುತ್ತಿದ್ದಾಗ ಕೈಯಲ್ಲಿ ದೋಣೆ ಹಿಡಿದು ಮೆಟ್ಟಿಲುಗಳ ಮೇಲೆ ನಿಂತಿದ್ದ ಬಿಜೆಪಿ ಸದಸ್ಯರು ನಮ್ಮನ್ನು ತಡೆದರು ಎಂದು ವಿವರಿಸಿದ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಸದಸ್ಯರು ಸಂಸತ್ ಭವನ ತೆರಳದಂತೆ ಬಿಜೆಪಿಯವರು ತಡೆದಿದ್ದಾರೆ. ನನ್ನನ್ನೂ ನೂಕಿದ್ದರಿಂದ ನೆಲದ ಮೇಲೆ ಕುಳಿತುಕೊಂಡೆ. ಅಂಬೇಡ್ಕರ್ ಕುರಿತ ಅಮಿತ್ ಶಾ ಮಾತು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು. ಅಮಿತ್ ಶಾ ಹೇಳಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
Advertisement