
ನವದೆಹಲಿ: ಜಾರಿ ನಿರ್ದೇಶನಾಲಯ ಬಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್, ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್, ಹೆಚ್ಎಂಡಿಎ ಮುಖ್ಯ ಇಂಜಿನಿಯರ್ ಬಿಎಲ್ಎಮ್ ರೆಡ್ಡಿ ವಿರುದ್ಧ ಇಸಿಐಆರ್ ದಾಖಲಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಇಡಿ ಪ್ರಕರಣವನ್ನು ದಾಖಲಿಸಲಾಗಿದೆ.
ED ಮೂಲಗಳು ಪ್ರಕರಣದ ದಾಖಲಾತಿಯನ್ನು ಖಚಿತಪಡಿಸಿದ್ದು, ರಾಮರಾವ್ ಅವರನ್ನು ಆರೋಪಿ ನಂ. 1 (ಎ-1), ಅರವಿಂದ್ ಕುಮಾರ್ ಎ-2 ಮತ್ತು ಬಿಎಲ್‌ಎನ್ ರೆಡ್ಡಿ ಎ-3 ಎಂದು ಹೆಸರಿಸಲಾಗಿದೆ.
ರೇಸ್ ನ್ನು ಆಯೋಜಿಸಲು ವಿದೇಶಿ ಕಂಪನಿಗೆ (ಫಾರ್ಮುಲಾ-ಇ ಆಪರೇಷನ್ಸ್ ಲಿಮಿಟೆಡ್, ಯುಕೆ ಮೂಲದ ಕಂಪನಿ) ಹಣವನ್ನು ವರ್ಗಾಯಿಸಿರುವುದರ ಬಗ್ಗೆ ಸಂಸ್ಥೆ ಗಮನಹರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಅಂತಿಮ ಫಲಾನುಭವಿಯನ್ನು ಗುರುತಿಸುವುದು ಮತ್ತು ಫಲಾನುಭವಿ ಖಾತೆಗಳಿಂದ ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ವಹಿವಾಟು ನಡೆದಿದೆಯೇ ಎಂಬುದನ್ನು ನಿರ್ಧರಿಸುವತ್ತ ಗಮನ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ACB ವಿಚಾರಣೆಗೆ ಸಮಾನಾಂತರವಾಗಿ ಇಡಿ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ. ರಾಮರಾವ್ ಮತ್ತು ಇತರ ಇಬ್ಬರು ಆರೋಪಿಗಳ ನಿವಾಸಗಳ ಮೇಲೆ ED ಶೋಧ ಅಥವಾ ದಾಳಿಗಳನ್ನು ಅಗತ್ಯವಿದ್ದಲ್ಲಿ ನಡೆಸುವ ಸಾಧ್ಯತೆ ಇದೆ. ಇದಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ತನ್ನ ಎದುರು ಹಾಜರಾಗುವಂತೆ ಮೂವರು ಆರೋಪಿಗಳಿಗೆ ಸಂಸ್ಥೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದ್ದು, ರಾಮರಾವ್ ಮತ್ತು ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ರಾಮರಾವ್, ಅರವಿಂದ್ ಕುಮಾರ್ ಮತ್ತು ಬಿಎಲ್‌ಎನ್ ರೆಡ್ಡಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಪ್ರತಿಯನ್ನು ನೀಡುವಂತೆ ಇಡಿ ಶುಕ್ರವಾರ ಎಸಿಬಿ ಮಹಾನಿರ್ದೇಶಕರಿಗೆ ಪತ್ರ ಬರೆದಿತ್ತು. ಇಡಿ ಪತ್ರದಲ್ಲಿ ಎಫ್‌ಐಆರ್, ದೂರಿನ ಪ್ರತಿಗಳು, ವಿದೇಶಿ ಕಂಪನಿಗಳಿಗೆ ಎಚ್‌ಎಂಡಿಎ ವರ್ಗಾಯಿಸಿದ ಹಣದ ವಿವರಗಳು ಮತ್ತು ಒಪ್ಪಂದಗಳ ಪ್ರತಿಗಳನ್ನು ಕೋರಲಾಗಿದೆ.
"ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ? ನಾವು 55 ಕೋಟಿ ರೂಪಾಯಿ ಪಾವತಿಸಿದ್ದೇವೆ. ಅವರು (ಫಾರ್ಮುಲಾ-ಇ) ಪಾವತಿಯನ್ನು ಒಪ್ಪಿಕೊಂಡಿದ್ದಾರೆ" ಎಂದು ಕೆಟಿಆರ್ ಎಂದೂ ಕರೆಯಲ್ಪಡುವ ರಾಮರಾವ್ ತಪ್ಪನ್ನು ನಿರಾಕರಿಸಿದ್ದರು.
ಇದು "ನೇರ" ಖಾತೆ ಎಂದು ಅವರು ಹೇಳಿದರು. ಎಚ್‌ಎಂಡಿಎ (ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ) ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದು, ಆ ಖಾತೆಯಿಂದ ಹಣವನ್ನು ವರ್ಗಾಯಿಸಲಾಗಿದೆ ಎಂದು ಎಸಿಬಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕೆಟಿಆರ್ ಹೇಳಿದ್ದರು.
Advertisement