ಬಿಜೆಪಿ-ಇಂಡಿಯಾ ಬ್ಲಾಕ್ ಕದನದೊಂದಿಗೆ ಸಂಸತ್ ಅಧಿವೇಶನ ಅಂತ್ಯ: ಕಲಾಪ ಲೋಕಸಭೆಯಲ್ಲಿ ಶೇ.54.5, ಮೇಲ್ಮನೆಯಲ್ಲಿ ಶೇ.40 ರಷ್ಟು ಫಲಪ್ರದ!

ಮುಂಬರುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಇಂತಹ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡುವ ಕೆಲಸವನ್ನು ಪ್ರತಿಪಕ್ಷಗಳು ಮಾಡದಂತೆ ಒತ್ತಾಯಿಸಿದರು.
PROTEST AT  Parliament outside
ಸಂಸತ್ ಹೊರಗೆ ಪ್ರತಿಭಟನೆಯ ಚಿತ್ರ
Updated on

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆಡಳಿತಾರೂಢ ಬಿಜೆಪಿ ಮತ್ತು ಇಂಡಿಯಾ ಬಣ ಸಂಘರ್ಷದೊಂದಿಗೆ ಶುಕ್ರವಾರ ಅಂತ್ಯವಾಯಿತು. ಕೊನೆಯ ದಿನವಾದ ಇಂದು ಕೂಡಾ ಪ್ರತಿಪಕ್ಷಗಳು ಅಂಬೇಡ್ಕರ್ ವಿಚಾರವಾಗಿ ಅಮಿತ್ ಶಾ ಕ್ಷಮೆ ಕೋರಬೇಕು ಹಾಗೂ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿಜಯ್ ಚೌಕಾ ಬಳಿ ಪ್ರತಿಭಟನೆ ನಡೆಸಿದವು.

ಈ ಮಧ್ಯೆ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಅಡ್ಡಿಪಡಿಸಿದ ಪ್ರತಿಪಕ್ಷಗಳನ್ನು ಟೀಕಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಂಬರುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಇಂತಹ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡುವ ಕೆಲಸವನ್ನು ಪ್ರತಿಪಕ್ಷಗಳು ಮಾಡದಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿಪಕ್ಷಗಳು ಅಡ್ಡಿಪಡಿಸಿದ್ದರಿಂದ ಸಂಸತ್ತಿನಲ್ಲಿ ಕಲಾಪ ಸರಿಯಾಗಿ ನಡೆಯಲಿಲ್ಲ. ಸುಗಮ ಕಲಾಪಕ್ಕೆ ಪ್ರಯತ್ನಿಸಿದೇವು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಇದೇ ರೀತಿಯ ಅಡ್ಡಿಯನ್ನುಂಟು ಮಾಡದಂತೆ ಪ್ರತಿಪಕ್ಷಗಳು ಮನವಿ ಮಾಡುತ್ತೇನೆ ಎಂದರು.

ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಶೇ. 54.5 ರಷ್ಟು ಮತ್ತು ರಾಜ್ಯ ಸಭೆಯಲ್ಲಿ ಶೇ. 40 ರಷ್ಟು ಕಾರ್ಯಗಳು ಪೂರ್ಣಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ದೇಶಕ್ಕಾಗಿ ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ. ಆದರೆ ಪ್ರತಿಪಕ್ಷಗಳ ನಡೆ ಪ್ರಗತಿಯನ್ನು ಧಕ್ಕೆ ತರುತ್ತಿದ್ದು, ಸಂಸತ್ತಿನ ಘನತೆಯನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದರು. ಸಂಸತ್ತಿನ ಕಾರ್ಯ ಕಲಾಪಗಳು ಶೇ, 100 ರಷ್ಟು ಫಲಪ್ರದವಾಗುವ ನಿಟ್ಟಿನಲ್ಲಿ ಸಹಕರಿಸುವಂತೆ ಎಲ್ಲಾ ನಾಯಕರನ್ನು ಒತ್ತಾಯಿಸುವುದಾಗಿ ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾಜ್ಯಸಭೆಯಲ್ಲಿ ಆಡಿದ ಮಾತುಗಳು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಯಿತು. ಈ ವಿಚಾರವಾಗಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಯಿತು. ಸಂಸತ್ತಿನ ಹೊರಗೆ ಗುರುವಾರ ಎನ್ ಡಿಎ ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ವೇಳೆ ಮುಖಾಮುಖಿಯಾದಾಗ ನೂಕಾಟ-ತಳ್ಳಾಟ ನಡೆದು ಇಬ್ಬರು ಬಿಜೆಪಿ ಸಂಸದರು ಗಾಯಗೊಂಡಿದ್ದರು. ಈ ವಿಚಾರವಾಗಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಅನುರಾಗ್ ಠಾಕೂರ್ ನೇತೃತ್ವದ ನಿಯೋಗ ಪೊಲೀಸರಿಗೆ ದೂರು ನೀಡಿತ್ತು.

ಮತ್ತೊಂದೆಡೆ ಬಿಜೆಪಿ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕೂಡಾ ಪ್ರತಿದೂರು ದಾಖಲಿಸಿತ್ತು. ಅಲ್ಲದೇ ಸ್ಪೀಕರ್ ಓಂ ಬಿರ್ಲಾ ಅವರಿಗೂ ಪತ್ರ ಬರೆದಿತ್ತು. ದೆಹಲಿ ಪೊಲೀಸರು ರಾಹುಲ್ ಗಾಂಧಿ ಮತ್ತಿತರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

PROTEST AT  Parliament outside
ಸಂಸತ್ ಮುಂದೆ ಹೈಡ್ರಾಮಾ: ರಾಹುಲ್ ಗಾಂಧಿ, ಇತರ ಸಂಸದರ ವಿರುದ್ಧ FIR ದಾಖಲು

ಪ್ರತಿಭಟನೆ ಮುಂದುವರೆದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಲೋಕಸಭೆ ಕಲಾಪ ಮುಂದೂಡುವ ಮುನ್ನಾ ಸದನವು 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತ ಎರಡು ಮಸೂದೆಗಳನ್ನು 27 ಲೋಕಸಭಾ ಸಂಸದರು ಮತ್ತು 12 ರಾಜ್ಯಸಭಾ ಸಂಸದರನ್ನು ಒಳಗೊಂಡ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com