
ಛತ್ತೀಸಗಢ: ಮೃತದೇಹದೊಂದಿಗಿನ ಸಂಭೋಗವು ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ರಡಿ ಅಥವಾ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಛತ್ತೀಸಗಢ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.
ಭಾರತದಲ್ಲಿನ ಕ್ರಿಮಿನಲ್ ಕಾನೂನುಗಳ ಪ್ರಕಾರ ಮೃತದೇಹದೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗುವುದು ಅತ್ಯಾಚಾರಕ್ಕೆ ಸಮನಾಗುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತ ಗುರು ಅವರ ಪೀಠವು, “ಮೃತದೇಹದ ಜೊತೆ ಸಂಭೋಗ ಮಾಡುವುದು “ಭಯಾನಕ” ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದು ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಸಂಬಂಧಿತ ಅಪರಾಧಗಳ ಪ್ರಕಾರ ಅತ್ಯಾಚಾರವಾಗಿರುವುದಿಲ್ಲ ಎಂದು ತಿಳಿಸಿದೆ. ಮೃತದೇಹದೊಂದಿಗಿನ ಲೈಂಗಿಕ ಕ್ರಿಯೆಯು ಯೋಚನೆ ಮಾಡಲೂ ಆಗದ ಹೀನಾಯ ಕೃತ್ಯವಾದರೂ, ಅದನ್ನು ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗದು ಎಂದು ಪೀಠ ಹೇಳಿದೆ. ಅಲ್ಲದೇ ಈ ಎರಡೂ ಕಾನೂನು ಸಂತ್ರಸ್ತೆ ಜೀವಂತವಾಗಿದ್ದರೆ ಮಾತ್ರ ಅನ್ವಯವಾಗಲಿದೆ ಎಂದು ಕೋರ್ಟ್ ವಿವರಿಸಿದೆ.
ಆರೋಪಿಗಳಾದ ನೀಲಕಂಠ, ನಾಗೇಶ್ ಮಾಡಿರುವುದು ಖಂಡಿತಾ ಅಪರಾಧವಾಗಿದೆ. ಅಂದರೆ ಮೃತದೇಹದ ಮೇಲೆ ಅತ್ಯಾಚಾರ ಎಸಗುವುದು ಅತ್ಯಂತ ಭೀಕರ ಅಪರಾಧಗಳಲ್ಲಿ ಒಂದಾಗಿದೆ ಎಂದು ಪೀಠವು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ. ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಹಾಗೂ ಆಕೆಯ ಸಾವಿನ ಬಳಿಕವೂ ಲೈಂಗಿಕವಾಗಿ ದೌರ್ಜನ್ಯ ಎಸಗಿದ ಪ್ರಕರಣವೊಂದರಲ್ಲಿ ಕೋರ್ಟ್ ಈ ತೀರ್ಪು ನೀಡಿದೆ.
Advertisement