

ಖಜುರಾಹೊ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಕನಸಿನ ನದಿ ಜೋಡಣೆ ಯೋಜನೆ ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಪ್ರದೇಶದಲ್ಲಿ ಕೆನ್-ಬೇಟ್ವಾ ನದಿ ಜೋಡಣೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಇಂದು ಖಜುರಾಹೊದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ದೇಶದ ಜಲಸಂಪನ್ಮೂಲ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ಈ ವಿಷಯದ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ನಡುವೆ ಪ್ರಧಾನಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
21 ನೇ ಶತಮಾನದಲ್ಲಿ, ಸಾಕಷ್ಟು ಮತ್ತು ಉತ್ತಮವಾಗಿ ನಿರ್ವಹಿಸಲಾದ ಜಲ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳು ಮಾತ್ರ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.
ಅಂಬೇಡ್ಕರ್ ಅವರ ದೂರದೃಷ್ಟಿಯು ದೇಶದ ಜಲ ಸಂಪನ್ಮೂಲಗಳ ಬಲವರ್ಧನೆ, ಅವುಗಳ ನಿರ್ವಹಣೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದೆ ಎಂದು ಮೋದಿ ಹೇಳಿದರು.
ಪ್ರಮುಖ ನದಿ ಕಣಿವೆ ಯೋಜನೆಗಳ ಅಭಿವೃದ್ಧಿ ಮತ್ತು ಕೇಂದ್ರ ಜಲ ಆಯೋಗದ ರಚನೆಯಲ್ಲಿ ಅಂಬೇಡ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಆದಾಗ್ಯೂ, ಕಾಂಗ್ರೆಸ್ ಪಕ್ಷವು ದೇಶದ ಹೆಚ್ಚುತ್ತಿರುವ ನೀರಿನ ಸಂರಕ್ಷಣೆಯ ಅಗತ್ಯಕ್ಕೆ ಎಂದಿಗೂ ಗಮನ ಕೊಡಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ದೌಧನ್ ಅಣೆಕಟ್ಟು ಮತ್ತು ಓಂಕಾರೇಶ್ವರ ತೇಲುವ ಸೌರ ಯೋಜನೆ - ಮಧ್ಯಪ್ರದೇಶದ ಮೊದಲ ಸೌರ ವಿದ್ಯುತ್ ಸ್ಥಾವರಕ್ಕೆ ಇಂದು ಪ್ರಧಾನಿ ಶಂಕುಸ್ಥಾಪನೆ ಮಾಡಿದರು.
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯಡಿ ಮಧ್ಯಪ್ರದೇಶದ 10 ಜಿಲ್ಲೆಗಳಲ್ಲಿ 8.11 ಲಕ್ಷ ಹೆಕ್ಟೇರ್ ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳಲ್ಲಿ 2.51 ಲಕ್ಷ ಹೆಕ್ಟೇರ್ ಸೇರಿದಂತೆ ಒಟ್ಟು 10.62 ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ
Advertisement