
ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ನಿಂದ ವಂಚನೆಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಛತ್ರಪತಿ ಸಂಭಾಜಿನಗರದ ಇಲಾಖಾ ಕ್ರೀಡಾ ಉಪನಿರ್ದೇಶಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಹರ್ಷಲ್ ಕುಮಾರ್ ಕ್ಷೀರಸಾಗರ್ ಎಂಬಾತ ನಕಲಿ ದಾಖಲೆಗಳ ಮೂಲಕ ಸರ್ಕಾರಿ ಖಜಾನೆಯಿಂದ 21 ಕೋಟಿ 59 ಲಕ್ಷ ರೂ. ವಂಚನೆ ನಡೆಸಿ ಇದೀಗ ತಲೆಮರೆಸಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, 2022ರ ಫೆಬ್ರವರಿಯಲ್ಲಿ ತಿಂಗಳಿಗೆ 13,000 ರೂಪಾಯಿ ಸಂಬಳಕ್ಕೆ ಹರ್ಷಲ್ ಸೇರಿಕೊಂಡಿದ್ದನು. 2024ರ ಜುಲೈ 1ರಿಂದ ಡಿಸೆಂಬರ್ 7ರವರೆಗೆ ಆತ ತನ್ನ ಮೊಬೈಲ್ ನಲ್ಲಿ ಸರ್ಕಾರಿ ಖಾತೆಯ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿ ನಕಲಿ ವಹಿವಾಟುಗಳನ್ನು ನಡೆಸಿದ್ದಾನೆ. ಈ ಹಣದಲ್ಲಿ ಹರ್ಷಲ್ ತನ್ನ ಗೆಳತಿಗೆ ಐಷಾರಾಮಿ 4 ಬೆಡ್ ರೂಂ ಫ್ಲಾಟ್ ಮತ್ತು ತನ್ನ ಸ್ನೇಹಿತನಿಗೆ ಮತ್ತೊಂದು ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾನೆ.
ಈ ಹಗರಣದ ಮೂಲಕ 1.30 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರು ಹಾಗೂ 32 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಬೈಕ್ ಖರೀದಿಸಿದ್ದನು. ಪೊಲೀಸರು ಹರ್ಷಲ್ ಗೆಳತಿ ಯಶೋದಾ ಶೆಟ್ಟಿ ಮತ್ತು ಆಕೆಯ ಪತಿ ಬಿ.ಕೆ. ಜೀವನ್‌ನನ್ನು ಬಂಧಿಸಲಾಗಿದ್ದು, ಹರ್ಷಲ್‌ಗಾಗಿ ಶೋಧ ಮುಂದುವರಿದಿದೆ. ಈ ಕುರಿತು ಜವಾಹರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಭಾಜಿನಗರ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಆಸ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿ ಹರ್ಷಲ್ ಗಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ತನಿಖೆಯ ಪ್ರಕಾರ, ಹರ್ಷಲ್ ಜಾಣತನದಿಂದ ಕ್ರೀಡಾ ಸಂಕೀರ್ಣದ ಹಳೆಯ ಲೆಟರ್‌ಹೆಡ್ ಬಳಸಿ ಬ್ಯಾಂಕ್‌ಗೆ ಇಮೇಲ್ ಕಳುಹಿಸಿದ್ದಾನೆ. ಕ್ರೀಡಾ ಸಂಕೀರ್ಣದ ಖಾತೆಯ ಇಮೇಲ್ ಐಡಿಯನ್ನು ಬದಲಾಯಿಸಲು ವಿನಂತಿಸಿದ್ದಾನೆ. ಅವರು ಹೊಸ ಇಮೇಲ್ ಖಾತೆಯನ್ನು ರಚಿಸಿದ್ದರು, ಅದು ಹಿಂದಿನದಕ್ಕಿಂತ ಸ್ವಲ್ಪ ಭಿನ್ನವಾಗಿತ್ತು. ಇದಾದ ಬಳಿಕ ಬ್ಯಾಂಕ್ ಖಾತೆಯ ಒಟಿಪಿ ಹಾಗೂ ಇತರೆ ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಗಿದ್ದನು. ನಂತರ ಹರ್ಷಲ್ ಇಂಟರ್ನೆಟ್ ಬ್ಯಾಂಕಿಂಗ್ ಸಕ್ರಿಯಗೊಳಿಸಿ ಜುಲೈ 1ರಿಂದ ಡಿಸೆಂಬರ್ 7ರವರೆಗೆ 13 ವಿವಿಧ ಬ್ಯಾಂಕ್ ಖಾತೆಗಳಿಗೆ 21.6 ಕೋಟಿ ರೂಪಾಯಿ ವರ್ಗಾಹಿಸಿದ್ದಾನೆ. ಈ ಹಣದಲ್ಲಿ ಆತ ಬಿಎಂಡಬ್ಲ್ಯು ಕಾರು (1.2 ಕೋಟಿ ರೂ.), ಎಸ್‌ಯುವಿ (1.3 ಕೋಟಿ ರೂ.), ಮತ್ತು ಬಿಎಂಡಬ್ಲ್ಯು ಬೈಕ್ (32 ಲಕ್ಷ ರೂ.) ಖರೀದಿಸಿದ್ದಾನೆ. ಇದಲ್ಲದೆ ತನ್ನ ಗೆಳತಿಗಾಗಿ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ ಐಷಾರಾಮಿ 4 BHK ಫ್ಲಾಟ್ ಅನ್ನು ಸಹ ಖರೀದಿಸಿದ್ದನು. ಅಷ್ಟೇ ಅಲ್ಲದೆ ವಜ್ರವುಳ್ಳ ಕನ್ನಡಕವನ್ನು ಸಹ ಆರ್ಡರ್ ಮಾಡಿದ್ದನು.
ವಂಚನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಹರ್ಷಲ್ ಬಳಸಿದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಪೊಲೀಸರು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿದ್ದು, ಹರ್ಷಲ್‌ಗಾಗಿ ಶೋಧ ನಡೆಸುತ್ತಿದ್ದಾರೆ. ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಆರ್ಥಿಕ ಅವ್ಯವಹಾರವನ್ನು ಗಮನಿಸಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement