
ನವದೆಹಲಿ: ರಾಜ್ ಘಾಟ್ ಸಂಕೀರ್ಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕವನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಪಂಜಾಬ್‌ನ ಹಿರಿಯ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸ್ಮಾರಕ ನಿರ್ಮಿಸಬಹುದಾದ ಸ್ಥಳದ ಬದಲು ನಿಗಮಬೋಧ ಘಾಟ್‌ನಲ್ಲಿ ಮನ ಮೋಹನ್ ಸಿಂಗ್ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಅವರನ್ನು ಕೇಂದ್ರ ಸರ್ಕಾರ ಅಪಮಾನಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದ ಒಂದು ದಿನದ ನಂತರ ಸಿಧು ಪತ್ರ ಬರೆದಿದ್ದಾರೆ.
ಸ್ಮಾರಕ ಜಾಗ ಗುರುತಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಈಗಾಗಲೇ ಸ್ಮಾರಕ ನಿರ್ಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಸ್ಥಳ ಗುರುತಿಸಲು ಟ್ರಸ್ಟ್ ರಚಿಸಲಾಗುವುದು ಎಂದು ಹೇಳಿದೆ. ಡಿಸೆಂಬರ್ 26 ರಂದು ನಿಧನರಾದ ಡಾ.ಮನಮೋಹನ್ ಸಿಂಗ್ ಅವರನ್ನು ಡಿಸೆಂಬರ್ 28 ರಂದು ನಿಗಮಬೋಧ್ ಘಾಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಈ ಮಧ್ಯೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಿಧು, "ಇದು ಕೇವಲ ಸ್ಮಾರಕದ ಬಗ್ಗೆ ಅಲ್ಲ. ಇದು ಐತಿಹಾಸಿಕ ಮಾನದಂಡಗಳು ಮತ್ತು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯುತ್ತದೆ. ಭಾರತ ಕ್ಷುಲಕ ರಾಜಕೀಯದಿಂದ ಮೇಲೆ ಬರಬೇಕು ಎಂದಿದ್ದಾರೆ.
ಈ ಸಂಪ್ರದಾಯದ ಘನತೆಯನ್ನು ಎತ್ತಿಹಿಡಿಯುವ ಮೂಲಕ ರಾಜ್ ಘಾಟ್ ಸಂಕೀರ್ಣದಲ್ಲಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕ ಖಾತ್ರಿಗೆ ನೀವು ಮಧ್ಯಸ್ಥಿಕೆ ವಹಿಸಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಮ್ಮ ರಾಷ್ಟ್ರದ ನಾಯಕರನ್ನು ಸ್ಮರಿಸುವ ಭವ್ಯಯುತ ಸಂಪ್ರದಾಯದ ಸಂಕೇತದ ಸ್ಥಳವಾದ ರಾಜ್ ಘಾಟ್ ಸಂಕೀರ್ಣದಲ್ಲಿ ದೇಶದ 13ನೇ ಪ್ರಧಾನಿಯಾದ ಡಾ. ಮನ್ ಮೋಹನ್ ಸಿಂಗ್ ಅವರ ಸ್ಮಾರಕ ಸ್ಥಾಪನೆಯ ಅಗತ್ಯದ ಬಗ್ಗೆ ಕಾಳಜಿ ಮತ್ತು ದೃಢವಿಶ್ವಾಸದಿಂದ ಪತ್ರ ಬರೆಯುತ್ತಿರುವುದಾಗಿ ಸಿಧು ತಿಳಿಸಿದ್ದಾರೆ.
Advertisement