
ನವದೆಹಲಿ: ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮಂಗಳವಾರ ರಾಜ್ಯದಲ್ಲಿನ ಜನಾಂಗೀಯ ಸಂಘರ್ಷಕ್ಕೆ ಕ್ಷಮೆಯಾಚಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದರೂ ಹಿಂಸಾಚಾರ ಪೀಡಿತ ರಾಜ್ಯಕ್ಕೆ ಹೋಗಲಿಲ್ಲ. ಹೀಗಾಗಿ ಸಿಎಂ ರೀತಿ ಪ್ರಧಾನಿ ಏಕೆ ಕ್ಷಮೆಯಾಚಿಸಬಾರದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಧಾನಿ ಮೋದಿ ಉದ್ದೇಶಪೂರ್ವಕವಾಗಿ ಮಣಿಪುರಕ್ಕೆ ಭೇಟಿ ನೀಡುವುದನ್ನು ತಪ್ಪಿಸುತ್ತಿದ್ದಾರೆ. ಪ್ರಧಾನಿ ಅವರ ನಿರ್ಲಕ್ಷ್ಯವನ್ನು ಮಣಿಪುರದ ಜನ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಪ್ರಧಾನಿ ಅವರು ಮಣಿಪುರಕ್ಕೆ ಹೋಗಿ, ಸಿಎಂ ಹೇಳಿದ ಮಾತನ್ನು ಏಕೆ ಹೇಳಬಾರದು? ಅವರು ಮೇ 4, 2023 ರಿಂದ ದೇಶ ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದರೂ ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ" ಎಂದು ರಮೇಶ್ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
"ಮಣಿಪುರದ ಜನರು ಈ ನಿರ್ಲಕ್ಷ್ಯವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷಕ್ಕೆ ಬಿರೇನ್ ಸಿಂಗ್ ಕ್ಷಮೆ ಯಾಚಿಸಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್, ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
"ಈ ವರ್ಷ ರಾಜ್ಯದಲ್ಲಿ ಏನಾಯಿತು ಎಂಬುದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು ಮತ್ತು ಅನೇಕರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ನಾನು ಈ ಕುರಿತು ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸಲು ಬಯಸುತ್ತೇನೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದ್ದು, ಹೊಸ ವರ್ಷದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ನಾನು ಆಶಿಸುತ್ತೇನೆ ಮಣಿಪುರ ಸಿಎಂ ಹೇಳಿದ್ದಾರೆ.
Advertisement