ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಗೆ 'ಭಾರತ ರತ್ನ' ಪ್ರಶಸ್ತಿ ಘೋಷಣೆ

ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರಿಗೆ(96 ವ) ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಘೋಷಣೆ ಮಾಡಲಾಗಿದೆ.
ಎಲ್ ಕೆ ಅಡ್ವಾಣಿ
ಎಲ್ ಕೆ ಅಡ್ವಾಣಿ

ನವದೆಹಲಿ: ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರಿಗೆ(96 ವ) ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಘೋಷಣೆ ಮಾಡಲಾಗಿದೆ.

ಈ ವಿಷಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ. ಈ ಕುರಿತು ಅವರೊಂದಿಗೆ ದೂರವಾಣಿ ಮೂಲಕ ಅವರಿಗೆ ನಾನೇ ಖುದ್ದಾಗಿ ತಿಳಿಸಿದ್ದು ಅದನ್ನು ಕೇಳಿ ಅವರು ಬಹಳ ಖುಷಿಪಟ್ಟರು ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. 

ಕಳೆದ ತಿಂಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡಿತು. ರಾಮ ಮಂದಿರ ಹೋರಾಟದ ರೂವಾರಿ, ಬಿಜೆಪಿ ಭೀಷ್ಮ ಎಂದೇ ಜನಪ್ರಿಯರು ಅಡ್ವಾಣಿಯವರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡ ಬೆನ್ನಲ್ಲೇ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿತ್ತು. ಅದಾದ ಒಂದೇ ವಾರದಲ್ಲಿ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಘೋಷಣೆಯಾಗಿದೆ. 

ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ 2002 ರಿಂದ 2004 ರವರೆಗೆ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ದಕ್ಕೂ ಮೊದಲು ಕೇಂದ್ರ ಗೃಹ ಖಾತೆ ಸೇರಿದಂತೆ ಹಲವು ಸಚಿವಾಲಯಗಳ ಮುಖ್ಯಸ್ಥರಾಗಿದ್ದರು. 1970 ಮತ್ತು 2019 ರ ನಡುವೆ ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿದ್ದರು. 

ಎಲ್ ಕೆ ಅಡ್ವಾಣಿ ಬಿಜೆಪಿಯ ಸುದೀರ್ಘ ಅವಧಿಯ ಅಧ್ಯಕ್ಷರು: ಎಲ್‌ಕೆ ಅಡ್ವಾಣಿ ಅವರು 1980 ರಲ್ಲಿ ಭಾರತೀಯ ಜನತಾ ಪಕ್ಷದ ಪ್ರಾರಂಭದಿಂದಲೂ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರ್ಕಾರಗಳ ಮುಖ್ಯಸ್ಥರಾಗಿ 90 ರ ದಶಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದರ ಬೆಳವಣಿಗೆಯನ್ನು ರೂಪಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಅವರು 2002 ರಿಂದ 2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com