ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್, ಚರಣ್ ಸಿಂಗ್ ಮತ್ತು ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಗೆ 'ಭಾರತ ರತ್ನ' ಪ್ರಶಸ್ತಿ

ಕಳೆದ ವಾರವಷ್ಟೇ ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ಧುರೀಣ ಎಲ್ ಕೆ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ 'ಭಾರತ ರತ್ನ' ಘೋಷಿಸಿದ್ದ ಕೇಂದ್ರ ಸರ್ಕಾರ ಶುಕ್ರವಾರ ಮೂವರಿಗೆ ಭಾರತ ರತ್ನ ಪ್ರದಾನ ಮಾಡುವುದಾಗಿ ಘೋಷಿಸಿದೆ.
ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್, ಡಾ ಎಂಎಸ್ ಸ್ವಾಮಿನಾಥನ್
ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್, ಡಾ ಎಂಎಸ್ ಸ್ವಾಮಿನಾಥನ್

ನವದೆಹಲಿ: ಕಳೆದ ವಾರವಷ್ಟೇ ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ಧುರೀಣ ಎಲ್ ಕೆ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ 'ಭಾರತ ರತ್ನ' ಘೋಷಿಸಿದ್ದ ಕೇಂದ್ರ ಸರ್ಕಾರ ಶುಕ್ರವಾರ ಮೂವರಿಗೆ ಭಾರತ ರತ್ನ ಪ್ರದಾನ ಮಾಡುವುದಾಗಿ ಘೋಷಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನ ಮಂತ್ರಿಗಳಾದ ಪಿ ವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಹಾಗೂ ದೇಶದ ಹಸಿರು ಕ್ರಾಂತಿಯ ಹರಿಕಾರ ಡಾ ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಗೌರವ ನೀಡುವುದಾಗಿ ಘೋಷಿಸಿದ್ದಾರೆ.

ನರಸಿಂಹ ರಾವ್ ಅವರು ಭಾರತವನ್ನು ನಿರ್ಣಾಯಕ ಪರಿವರ್ತನೆಗಳ ಮೂಲಕ ಮುನ್ನಡೆಸಿ ದೇಶದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದರು, ಚರಣ್ ಸಿಂಗ್ ಅವರು ದೇಶಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ನರಸಿಂಹ ರಾವ್ ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ಅದರ ಸಮೃದ್ಧಿ, ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವುದು ನಮ್ಮ ಸರ್ಕಾರದ ಸೌಭಾಗ್ಯ. ದೇಶಕ್ಕೆ ಅವರು ನೀಡಿದ ಅನುಪಮ ಕೊಡುಗೆಗೆ ಈ ಗೌರವ ಸಮರ್ಪಿಸಲಾಗಿದೆ. ಅವರು ತಮ್ಮ ಇಡೀ ಜೀವನವನ್ನು ರೈತರ ಹಕ್ಕುಗಳು ಮತ್ತು ಅವರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ದೇಶದ ಗೃಹ ಮಂತ್ರಿಯಾಗಿ ಅವರು ಯಾವಾಗಲೂ ರಾಷ್ಟ್ರ ನಿರ್ಮಾಣಕ್ಕೆ ಉತ್ತೇಜನ ನೀಡಿದರು. ತುರ್ತು ಪರಿಸ್ಥಿತಿಯ ವಿರುದ್ಧವೂ ಅವರು ದೃಢವಾಗಿ ನಿಂತಿದ್ದರು. ನಮ್ಮ ರೈತ ಸಹೋದರ ಸಹೋದರಿಯರಿಗೆ ಅವರ ಸಮರ್ಪಣೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಅವರ ಬದ್ಧತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ. 

ಭಾರತ ಸರ್ಕಾರವು ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣದಲ್ಲಿ ನಮ್ಮ ದೇಶಕ್ಕೆ ನೀಡಿದ ಸ್ಮಾರಕ ಕೊಡುಗೆಗಳನ್ನು ಗುರುತಿಸಿ ಭಾರತ ರತ್ನ ನೀಡುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ. ಸವಾಲಿನ ಸಮಯದಲ್ಲಿ ಭಾರತವು ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದರು. ಭಾರತೀಯ ಕೃಷಿಯನ್ನು ಆಧುನೀಕರಿಸುವಲ್ಲಿ ಮಹೋನ್ನತ ಪ್ರಯತ್ನಗಳನ್ನು ಮಾಡಿದರು. ನಾವೀನ್ಯತೆ ಮತ್ತು ಮಾರ್ಗದರ್ಶಕರಾಗಿ ಅವರ ಅಮೂಲ್ಯವಾದ ಕೆಲಸವನ್ನು ನಾವು ಗುರುತಿಸುತ್ತೇವೆ. ವಿದ್ಯಾರ್ಥಿಗಳಲ್ಲಿ ಕಲಿಕೆ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುತ್ತೇವೆ. ಡಾ. ಸ್ವಾಮಿನಾಥನ್ ಅವರ ದಾರ್ಶನಿಕ ನಾಯಕತ್ವವು ಭಾರತೀಯ ಕೃಷಿಯನ್ನು ಪರಿವರ್ತಿಸಿದ್ದು ಮಾತ್ರವಲ್ಲದೆ ರಾಷ್ಟ್ರದ ಆಹಾರ ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸಿದೆ ಎಂದು ಹೊಗಳಿದ್ದಾರೆ.

ಆರ್ಥಿಕ ಸುಧಾರಣೆಯ ಹರಿಕಾರ ಪಿ.ವಿ. ನರಸಿಂಹ ರಾವ್:  ಜೂನ್ 28, 1921 ರಂದು ಜನಿಸಿದ ಪಿ ವಿ ನರಸಿಂಹ ರಾವ್ ಅವರ ಪೂರ್ಣ ಹೆಸರು ಪಾಮುಲಪರ್ತಿ ವೆಂಕಟ ನರಸಿಂಹ ರಾವ್. ಇವರು 1991 ರಿಂದ 1996 ರವರೆಗೆ ಭಾರತದ ಒಂಬತ್ತನೇ ಪ್ರಧಾನ ಮಂತ್ರಿಯಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಕ್ರಮಗಳನ್ನು ಒಳಗೊಂಡಂತೆ ಗಮನಾರ್ಹ ಅನೇಕ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದರು.

ರಾಜಕೀಯ ಸವಾಲುಗಳ ಹೊರತಾಗಿಯೂ ಭಾರತವನ್ನು ಆರ್ಥಿಕ ಸಂಕಷ್ಟದಿಂದ ಹೊರತಂದರು. ಭಾರತದ ಆರ್ಥಿಕ ಪರಿವರ್ತನೆ ಮತ್ತು ರಾಜಕೀಯ ಬದಲಾವಣೆಗೆ ರಾವ್ ಅವರ ಕೊಡುಗೆ ಅಪಾರ. ಅವರು ಪ್ರಖಂಡ ವಿದ್ವಾಂಸರೂ ಆಗಿದ್ದರು. ಅವರು ಡಿಸೆಂಬರ್ 23, 2004 ರಂದು ನಿಧನರಾದರು.

ಪಿ.ವಿ.ನರಸಿಂಹರಾವ್ ಅವರ ಮೊಮ್ಮಗ ಎನ್.ವಿ.ಸುಭಾಷ್ ಮಾತನಾಡಿ, ಮಾಜಿ ಪ್ರಧಾನಿಯವರ ಕೊಡುಗೆಯನ್ನು ಬಹಳ ಕಾಲ ಕಡೆಗಣಿಸಲಾಗಿದೆ. ನರಸಿಂಹರಾವ್  ಅವರಿಗೆ ಭಾರತ ರತ್ನ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ನರಸಿಂಹ್‌ ರಾವ್‌ ಅವರ ಕೊಡುಗೆಯನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ. ನರಸಿಂಹ ರಾವ್ ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com