
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನ ಇಳಿಜಾರುಗಳಲ್ಲಿ ಗುರುವಾರ ಹಿಮಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವಿದೇಶಿ ಪ್ರಜೆ ಸಾವನ್ನಪ್ಪಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಾಂಗ್‌ದೂರಿ ಇಳಿಜಾರಿನಲ್ಲಿ ಹಿಮಕುಸಿತ ಸಂಭವಿಸಿದೆ. ಇದರಿಂದ ಹಲವಾರು ಸ್ಕೀಯಿಂಗ್ ಪಟು ಸಿಕ್ಕಿಬಿದ್ದಿದ್ದಾರೆ. ಸ್ಥಳೀಯ ನಿವಾಸಿಗಳಿಲ್ಲದೇ ವಿದೇಶಿಗರು ಸ್ಕೀಯಿಂಗ್ ಇಳಿಜಾರುಗಳಿಗೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಸೇನಾ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರದ ಗಸ್ತು ತಂಡ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಐವರು ಸ್ಕೀಯರ್‌ಗಳನ್ನು ರಕ್ಷಿಸಲಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಒಬ್ಬ ಸ್ಕೀಯರ್ ಮೃತಪಟ್ಟಿದ್ದಾರೆ. ಒಬ್ಬರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಗಾಯಗೊಂಡಿದ್ದ ಐವರು ಸ್ಕೀಯರ್‌ಗಳನ್ನು ರಕ್ಷಿಸಲಾಗಿದೆ. ಅಪಘಾತದ ಬಗ್ಗೆ ತಿಳಿದ ತಕ್ಷಣ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ವಿದೇಶಿ ಸ್ಕೀಯರ್‌ಗಳ ಗುರುತು ಪತ್ತೆ ಮಾಡಲಾಗುತ್ತಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿದ್ದು, ಇದೇ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ.
Advertisement