ಪಶ್ಚಿಮ ಬಂಗಾಳ: ಸೆಕ್ಸ್ ದಂಧೆ ನಡೆಸುತ್ತಿದ್ದ 'ಬಿಜೆಪಿ ನಾಯಕ'ನ ಬಂಧನ

ಹೋಟೆಲ್‌ವೊಂದರಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 'ಸ್ಥಳೀಯ ಭಾರತೀಯ ಜನತಾ ಪಕ್ಷದ ನಾಯಕ' ಹಾಗೂ ಇತರ 10 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 'ಸ್ಥಳೀಯ ಭಾರತೀಯ ಜನತಾ ಪಕ್ಷದ ನಾಯಕ' ಹಾಗೂ ಇತರ 10 ಮಂದಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆದರೆ ರಾಜ್ಯದ ಪ್ರಮುಖ ವಿರೋಧ ಪಕ್ಷ ಬಿಜೆಪಿ ಆರೋಪಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಸ್ಥಳೀಯ ಬಿಜೆಪಿ ನಾಯಕ ಎಂದು ಹೇಳಿಕೊಂಡ ಸಬ್ಯಸಾಚಿ ಘೋಷ್ ಮತ್ತು ಅವರ 10 ಸಹಚರರನ್ನು ಗುರುವಾರ ಸಂಜೆ ಸಂಕ್ರೈಲ್ ಪ್ರದೇಶದ ಹೋಟೆಲ್‌ ಮೇಲೆ ನಡೆದ ಪೋಲಿಸ್ ದಾಳಿಯ ಸಮಯದಲ್ಲಿ ಬಂಧಿಸಲಾಗಿದೆ.

ಈ ಘಟನೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಬಿಜೆಪಿಯು ಸೆಕ್ಸ್ ವ್ಯಾಪಾರದಲ್ಲಿ ತೊಡಗಿರುವ ನಾಯಕರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಆರೋಪಿಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದೆ. ಸಂದೇಶಖಾಲಿಯಲ್ಲಿ ಲೈಂಗಿಕ ದೌರ್ಜನ್ಯದ ಆಪಾದಿತ ಘಟನೆಗಳಿಂದ ಗಮನ ಬೇರೆಡೆಗೆ ಸೆಳೆಯಲು ಪೊಲೀಸರು ಹತಾಶಯಿಂದ ಈ ಬಂಧನ ಮಾಡಿದ್ದಾರೆ ಎಂದು ತಿರುಗೇಟು ನೀಡಿದೆ.

"ಪೊಲೀಸ್ ದಾಳಿಯ ಸಂದರ್ಭದಲ್ಲಿ, ಸಬ್ಯಸಾಚಿ ಘೋಷ್ ಒಡೆತನದ ಹೋಟೆಲ್‌ನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಮತ್ತು ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ನಾಲ್ವರು ಮಹಿಳೆಯರನ್ನು ಲಿಲುವಾ ಹೋಮ್‌ಗೆ ಮತ್ತು ಇಬ್ಬರು ಅಪ್ರಾಪ್ತರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕರೆದೊಯ್ಯಲಾಗಿದೆ.

ಬಂಧಿತರು ಸೆಕ್ಸ್ ದಂಧೆ ನಡೆಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 116ರ ಬಳಿ ಇರುವ ಹೋಟೆಲ್‌ಗೆ ಹುಡುಗಿಯರು ಮತ್ತು ಮಹಿಳೆಯರನ್ನು ಕರೆತರುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಕ್ರೈಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಸಬ್ಯಸಾಚಿ ಘೋಷ್ ಅವರು ಬಿಜೆಪಿಯ ಹೌರಾ ಘಟಕದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com