
ನವದೆಹಲಿ: ಮೋದಿ ಸರ್ಕಾರದ ತಪ್ಪು ನಿರ್ವಹಣೆಯಿಂದಾಗಿ ಆರ್ಥಿಕತೆ 20 ವರ್ಷ ಹಿಂದಕ್ಕೆ ಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆರ್ಥಿಕ ಬೆಳವಣಿಗೆ ಅಂದರೆ ಕೃಷಿಯಿಂದ ಉದ್ಯಮ, ಸೇವೆಗಳಿಗೆ ಉದ್ಯೋಗದ ವೈವಿಧ್ಯೀಕರಣ ಎಂದು ಕಾಂಗ್ರೆಸ್ ಹೇಳಿದ್ದು, ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಸಾಧಿಸಿದ ಪ್ರಗತಿಯನ್ನು ನರೇಂದ್ರ ಮೋದಿ ಸರ್ಕಾರ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2004-05 ಹಾಗೂ 2017-18 ನಡುವೆ ಕೃಷಿ ಸಂಬಂಧಿತ ನೌಕರರು 6.7 ಕೋಟಿಯಷ್ಟು ಕಡಿಮೆಯಾಗಿದ್ದಾರೆ, ಕಡಿಮೆ ದೈನಂದಿನ ವೇತನ ಪಡೆಯುವ ಬದಲಿಗೆ, ಹೆಚ್ಚು ವೇತನ ನೀಡುವ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳ ಉದ್ಯೋಗಗಳಿಗೆ ಸೇರಿದ್ದರು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇದು ಐತಿಹಾಸಿಕ ಸಾಧನೆಯಾಗಿ, ಭಾರತ ಸಾಧಿಸಿದ ಮಧ್ಯಮ ಆದಾಯ ದೇಶಗಳ ಮೈಲಿಗಲ್ಲಾಗಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಈ ಪ್ರಗತಿಯನ್ನು ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸಾಧಿಸಲಾಗಿತ್ತು. ಇದನ್ನು ಮೋದಿ ಸರ್ಕಾರ 3 ವರ್ಷಗಳ ಅನ್ಯಾಯ ಕಾಲದಲ್ಲಿ ಬುಡಮೇಲು ಮಾಡಿತ್ತು ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
2018-19 ರಿಂದ ಕೃಷಿಕ ನೌಕರರ ಸಂಖ್ಯೆ 6 ಕೋಟಿಗಳಿಗೆ ಏರಿಕೆಯಾಗಿದ್ದು, ಇದು ಕೋವಿಡ್ ಪೂರ್ವದಲ್ಲಿದ್ದ ಸಂಖ್ಯೆಗೆ ಮರಳಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಭಾರತವನ್ನು ಸಮೃದ್ಧಿಯ ಪಥದಲ್ಲಿ ನಡೆಸುವುದಕ್ಕಿಂತ ಪ್ರಧಾನಿ ಅವರ ಅನಾಹುತಕಾರಿ ನಿರ್ವಹಣೆ ನಮ್ಮ ದೇಶದ ಆರ್ಥಿಕ ರೂಪಾಂತರವನ್ನು 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಆರ್ಥಿಕತೆಯನ್ನು ನಿಭಾಯಿಸುವ ವಿಷಯವಾಗಿ ಸರ್ಕಾರದ ಮೇಲೆ ದಾಳಿ ಮಾಡುತ್ತಿದೆ ಮತ್ತು "ಹೆಚ್ಚುತ್ತಿರುವ" ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ.
Advertisement