

ನವದೆಹಲಿ: ಸುಮಾರು ಎರಡು ವರ್ಷಗಳ ನಂತರ ಭ್ರಷ್ಟಾಚಾರ ವಿರೋಧಿ ಲೋಕಪಾಲ್‌ನ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಎ ಎಂ ಖಾನ್ವಿಲ್ಕರ್ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ.
ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರು ಮೇ 27, 2022 ರಂದು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಲೋಕಪಾಲ್ ಖಾಯಂ ಮುಖ್ಯಸ್ಥರಿಲ್ಲದೆ ಕಾರ್ಯನಿರ್ವಹಿಸುತ್ತಿದೆ.
ಲೋಕಪಾಲದ ನ್ಯಾಯಾಂಗ ಸದಸ್ಯರಾಗಿರುವ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಮೊಹಂತಿ ಅವರು ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿದ್ದಾರೆ.
ರಾಷ್ಟ್ರಪತಿ ಭವನದ ಪ್ರಕಟಣೆಯ ಪ್ರಕಾರ, ನ್ಯಾಯಮೂರ್ತಿ ಅಜಯ್ ಮಾಣಿಕ್ ರಾವ್ ಖಾನ್ವಿಲ್ಕರ್ ಅವರನ್ನು ಲೋಕಪಾಲ್ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದ ಖಾನ್ವಿಲ್ಕರ್ ಅವರು ಜುಲೈ 2022 ರಲ್ಲಿ ನಿವೃತ್ತರಾಗಿದ್ದರು.
ನಿವೃತ್ತ ನ್ಯಾಯಮೂರ್ತಿಗಳಾದ ಲಿಂಗಪ್ಪ ನಾರಾಯಣ ಸ್ವಾಮಿ, ಸಂಜಯ್ ಯಾದವ್ ಮತ್ತು ರಿತು ರಾಜ್ ಅವಸ್ತಿ ಅವರನ್ನು ಲೋಕಪಾಲ್ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ಸುಶೀಲ್ ಚಂದ್ರ, ಪಂಕಜ್ ಕುಮಾರ್ ಮತ್ತು ಅಜಯ್ ಟಿರ್ಕಿ ನ್ಯಾಯಾಂಗೇತರ ಸದಸ್ಯರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013ರ ಅಡಿಯಲ್ಲಿ ಲೋಕಪಾಲ್ ಅಸ್ತಿತ್ವಕ್ಕೆ ಬಂದಿತ್ತು. ಲೋಕಪಾಲ ಕಾಯಿದೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಚಾರಣೆ ಮತ್ತು ತನಿಖೆ ನಡೆಸುವ ಕಾರ್ಯವನ್ನು ಲೋಕಪಾಲಕ್ಕೆ ವಹಿಸಲಾಗಿದೆ.
Advertisement